ಬೆಂಗಳೂರು : ನಗರದ ಹೆಬ್ಬಾಳದಿಂದ ಸಿಲ್ಕ್ಬೋರ್ಡ್ವರೆಗೂ ಸುರಂಗ ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೊರಡಿಸಿರುವ ಟೆಂಡರ್ ಅಧಿಸೂಚನೆ ರದ್ದುಪಡಿಸುವಂತೆ ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಸಂಬಂಧ ಹೈಕೋರ್ಟ್ ಕೇಂದ್ರ ಮತ್ತು ರಾಜ್ಯ ಸರ್ಕಾರ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಚಲನಚಿತ್ರ ಕಲಾವಿದ ಪ್ರಕಾಶ್ ಬೆಳವಾಡಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗಿಯ ಪೀಠ ನೋಟಿಸ್ ಜಾರಿ ಮಾಡಿ, ಮುಂದಿನ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿದೆ.
ಈ ವೇಳೆ ಅರ್ಜಿದಾರರ ಪರ ವಾದ ಮಂಡಿಸಿ ವಕೀಲರಾದ ಸಂಸದ ತೇಜಸ್ವಿ ಸೂರ್ಯ, ಉದ್ದೇಶಿತ ಸುರಂಗ ಮಾರ್ಗಕ್ಕಾಗಿ ನಗರದ ಶ್ವಾಸಕೋಶದಂತಿರುವ ಲಾಲ್ಬಾಗ್ನಲ್ಲಿ 6.5 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವುದಕ್ಕೆ ಉದ್ದೇಶಿಸಲಾಗಿದೆ. ಇದೇ ಕಾರಣದಿಂದ ಲಾಲ್ಬಾಗ್ನ ಈ ಭಾಗದಲ್ಲಿ ಈಗಾಗಲೇ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಡಾ. ಆದಿಕೇಶವಲು ಮತ್ತಿತರರು ಸಲ್ಲಿಸಿದ್ದ ಅರ್ಜಿದಾರರ ಪರ ವಕೀಲರು, ಇತ್ತೀಚಿನ ಬೆಳವಣಿಗೆಗೆ ಸಂಬಂಧಿಸಿದಂತೆ ನಗರದ ಐತಿಹಾಸಿಕ ಕೇಂದ್ರವಾಗಿರುವ ಲಾಲ್ಬಾಗ್ನಲ್ಲಿ 6 ಎಕರೆ ಜಮೀನನ್ನು ಯೋಜನೆಗೆ ಬಳಕೆ ಮಾಡಿಕೊಳ್ಳುವುದಕ್ಕಾಗಿ ಗುರುತಿಸಲಾಗಿದೆ. ರಾಜಧಾನಿ ಬೆಂಗಳೂರು ನಗರದಲ್ಲಿ ಮರಗಳು ಅಪಾಯದಂಚಿನಲ್ಲಿವೆ. ಮರಗಳನ್ನು ಕಡಿಯುವುದಕ್ಕೆ ಯಾವ ಕಾರಣದಿಂದ ಮುಂದಾಗಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ನ್ಯಾಯಾಲಯದ ಅನುಮತಿಯಿಲ್ಲದೇ ಮರಗಳನ್ನು ಕಡಿಯುದಂತೆ ಆದೇಶ ನೀಡಬೇಕು ಎಂದು ಪೀಠಕ್ಕೆ ವಿವರಿಸಿದರು.



















