ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಪರ ವಕೀಲರಿಗೆ ಹೈಕೋರ್ಟ್ (Karnataka High Court) ಚಾಟಿ ಬೀಸಿದೆ
ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಪ್ರಕರಣದಲ್ಲಿ (Rape Case) ಎಸ್‌ಐಟಿ ಜಪ್ತಿ ಮಾಡಿರುವ ವಿಡಿಯೋ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಇಂದು ಹೈಕೋರ್ಟ್ ಏಕಸದಸ್ಯ ಪೀಠ ನಡೆಸಿತು. ಈ ವೇಳೆ ಎಸ್‌ಐಟಿ (SIT) ಜಪ್ತಿ ಮಾಡಿರುವ ವೀಡಿಯೋಗಳನ್ನು ನೀಡುವಂತೆ ಪ್ರಜ್ವಲ್ ಪರ ವಕೀಲರು ಮನವಿ ಮಾಡಿದರು.
ಆದರೆ, ಇದಕ್ಕೆ ಕೋರ್ಟ್ ಕೆಂಡಾಮಂಡಲವಾಗಿದೆ. ಇತರೆ ಮಹಿಳೆಯರ ಖಾಸಗಿತನ ಉಲ್ಲಂಘಿಸುವ ದಾಖಲೆಗಳು ನಿಮಗೆ ಏಕೆ ಬೇಕು? ಎಲ್ಲವೂ ಅಶ್ಲೀಲವಾಗಿದೆ. ಅಶ್ಲೀಲತೆಗೆ ಒಂದು ಮಿತಿ ಇರಬೇಕು ಎಂದು ಪೀಠ ಬೇಸರ ವ್ಯಕ್ತಪಡಿಸಿದೆ.
ಪ್ರಕರಣ ದಾಖಲು ಮಾಡಿದವರ ವಿಡಿಯೋ ಮಾತ್ರ ನೀಡಿ ಎಂದು ಕೋರ್ಟ್ ಸೂಚಿಸಿತು. ಮಹಿಳೆಯರ ಖಾಸಗಿತನ ಗೌರವಿಸುವುದು ಎಲ್ಲರ ಕರ್ತವ್ಯ. ಪ್ರಜ್ವಲ್ ರೇವಣ್ಣ ಅಂದ ಕೂಡಲೇ ಕಾನೂನು ಬದಲಾವಣೆ ಮಾಡಲು ಆಗಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಎಸ್‌ಪಿಪಿ ಜಗದೀಶ್, ಈಗಾಗಲೇ ಎಲ್ಲ ವಿಡಿಯೋ ಹಾಗೂ ಫೋಟೋ ನೀಡಲಾಗಿದೆ. ಪ್ರಕರಣದ ವಿಚಾರಣೆಯನ್ನು ವಿಳಂಬ ಮಾಡುವುದಕ್ಕಾಗಿ ಈ ರೀತಿ ಅರ್ಜಿ ಸಲ್ಲಿಸಲಾಗುತ್ತಿದೆ ಎಂದು ಆರೋಪಿಸಿದರು.