ಬೆಂಗಳೂರು: ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಸೇರಿ ವಿವಿಧ ಸಣ್ಣ ಉಳಿತಾಯ ಯೋಜನೆಗಳ ಮೂಲಕ ಹಣ ಠೇವಣಿ ಮಾಡುವವರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಪಿಪಿಎಫ್ ಸೇರಿ ಯಾವುದೇ ಸಣ್ಣ ಉಳಿತಾಯ ಯೋಜನೆಗಳ ನಾಮನಿರ್ದೇಶಿತರ (ನಾಮಿನಿಗಳು) ವಿವರ ಬದಲಾವಣೆಗೆ ಇದ್ದ ಶುಲ್ಕವನ್ನು ಕೇಂದ್ರ ಸರ್ಕಾರವು ತೆಗೆದುಹಾಕಿದೆ. ಇದರಿಂದಾಗಿ ಹೂಡಿಕೆದಾರರಿಗೆ ಹಣ ಉಳಿಯಲಿದೆ.
ಇನ್ನುಮುಂದೆ ಸಣ್ಣ ಉಳಿತಾಯ ಯೋಜನೆಗಳಲ್ಲಿ ನಾಮಿನೇಷನ್ ಬದಲಾಯಿಸಲು ಯಾವುದೇ ಶುಲ್ಕಗಳು ಅನ್ವಯವಾಗುವುದಿಲ್ಲ. ಈ ಹಿಂದೆ ಬ್ಯಾಂಕ್ ಗಳು ಮತ್ತು ಅಂಚೆ ಕಚೇರಿಗಳು ಸಣ್ಣ ಉಳಿತಾಯ ಯೋಜನೆಗಳ ನಾಮಿನಿ ವಿವರಗಳನ್ನು ಬದಲಾಯಿಸಲು ಅಥವಾ ಹೊಸ ನಾಮಿನಿಯನ್ನು ಸೇರಿಸಲು 50 ರೂ. ಶುಲ್ಕ ವಿಧಿಸುತ್ತಿದ್ದವು. ಈಗ ಉಚಿತವಾಗಿ ನಾಮಿನಿಗಳ ಹೆಸರನ್ನು ಸೇರಿಸಬಹುದಾಗಿದೆ.
ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವವರು ನಾಮಿನಿಯ ವಿವರಗಳನ್ನು ಯಾವುದೇ ಸಮಯದಲ್ಲಿ ಬದಲಾಯಿಸಬಹುದು. ಅಥವಾ ನೀವು ಹೊಸ ನಾಮಿನಿಯನ್ನು ಸೇರಿಸಬಹುದು. ಅಲ್ಲದೆ, ನಾಮನಿರ್ದೇಶಿತರ ನಡುವಿನ ಶೇಕಡಾವಾರು ಅನುಪಾತವನ್ನು ಮಾರ್ಪಡಿಸಬಹುದು. ಬ್ಯಾಂಕ್ ಗಳು ಮತ್ತು ಅಂಚೆ ಕಚೇರಿಗಳು ಇನ್ನು ಮುಂದೆ ಇದಕ್ಕಾಗಿ ಯಾವುದೇ ಶುಲ್ಕವನ್ನು ವಿಧಿಸುವಂತಿಲ್ಲ ಎಂಬುದಾಗಿ ಕೇಂದ್ರ ಸರ್ಕಾರ ಆದೇಶಿಸಿದೆ.
ಘೋಷಣೆ ಮಾಡಿದ್ದ ಸಚಿವೆ
ನಾಮಿನೇಷನ್ ಅಪ್ಡೇಟ್ ಶುಲ್ಕವನ್ನು ರದ್ದುಗೊಳಿಸುವುದಾಗಿ ಕೆಲ ದಿನಗಳ ಹಿಂದಷ್ಟೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದರು. ಪಿಪಿಎಫ್ ಖಾತೆಗಳಲ್ಲಿ ನಾಮಿನಿ ವಿವರಗಳನ್ನು ಎಡಿಟ್ ಮಾಡಲು ಹಣಕಾಸು ಸಂಸ್ಥೆಗಳು ಶುಲ್ಕ ವಿಧಿಸುತ್ತಿರುವುದು ಗಮನಕ್ಕೆ ಬಂದಿದೆ. ಇದಕ್ಕೆ ಪರಿಹಾರವಾಗಿ ಪಿಪಿಎಫ್ ಖಾತೆಗಳಲ್ಲಿ ನಾಮಿನಿ ವಿವರಗಳನ್ನು ಯಾವುದೇ ಶುಲ್ಕವಿಲ್ಲದೆ ಬದಲಾಯಿಸಲು ಗೆಜೆಟ್ ಅಧಿಸೂಚನೆ ಹೊರಡಿಸಲಾಗುವುದು ಎಂದು ಹೇಳಿದ್ದರು.