ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯ ಲಾಭವನ್ನು ಕೋಟ್ಯಾಂತರ ಮಹಿಳೆಯರು ಪಡೆಯುತ್ತಿರುವ ನಡುವೆಯೇ, ಬಿಎಂಟಿಸಿಯ ಕೆಲ ನಿರ್ವಾಹಕರು ಯೋಜನೆಯನ್ನು ದುರುಪಯೋಗಪಡಿಸಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಕನ್ನಡ ಓದಲು ಬಾರದ ಪುರುಷ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು, ಶಕ್ತಿ ಯೋಜನೆಯ ಉಚಿತ ಟಿಕೆಟ್‌ಗಳನ್ನು ನೀಡಿ ಹಣ ವಸೂಲಿ ಮಾಡಲಾಗುತ್ತಿತ್ತು. ಟಿಕೆಟ್ ಮೇಲೆ “ಕನ್ನಡದಲ್ಲಿ ಮಾತ್ರ ಉಚಿತ ಪ್ರಯಾಣ” ಎಂದು ಮುದ್ರಿತವಾಗಿರುವುದನ್ನು ದುರುಪಯೋಗಪಡಿಸಿಕೊಂಡು ಈ ಮೋಸ ನಡೆಯುತ್ತಿತ್ತು.
ಇನ್ನೊಂದೆಡೆ, ಪ್ರಯಾಣಿಕರ ಸೌಲಭ್ಯಕ್ಕಾಗಿ ಬಿಎಂಟಿಸಿ ಅಳವಡಿಸಿದ್ದ ಯುಪಿಐ ಕ್ಯೂಆರ್ ಕೋಡ್ ಬಳಕೆ ಮಾಡಬೇಕಾದಲ್ಲಿ, ಕೆಲ ನಿರ್ವಾಹಕರು ತಮ್ಮ ವೈಯಕ್ತಿಕ ಯುಪಿಐ ವಿವರಗಳನ್ನು ನೀಡಿ ಹಣ ಸಂಗ್ರಹಿಸುತ್ತಿದ್ದರು. ಇದರ ಮೂಲಕ ನಿಗಮಕ್ಕೆ ಸೇರಬೇಕಿದ್ದ ಲಕ್ಷಾಂತರ ರೂಪಾಯಿ ಹಣವನ್ನು ತಮ್ಮ ಖಾಸಗಿ ಖಾತೆಗಳಿಗೆ ವರ್ಗಾಯಿಸಿಕೊಂಡಿರುವುದು ಪತ್ತೆಯಾಗಿದೆ.
ಈ ಕುರಿತು ನಡೆದ ತನಿಖೆಯಲ್ಲಿ ನಾಲ್ವರು ನಿರ್ವಾಹಕರ ಖಾತೆಗಳಲ್ಲಿ ಸಾವಿರಾರು ರೂಪಾಯಿ ಅಕ್ರಮ ಹಣ ಪತ್ತೆಯಾಗಿದೆ. ಪರಿಣಾಮವಾಗಿ, ಸಂಬಂಧಪಟ್ಟ ನಾಲ್ವರು ಕಿಲಾಡಿ ಕಂಡಕ್ಟರ್‌ಗಳನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಬಿಎಂಟಿಸಿ ಅಧಿಕಾರಿಗಳು ಈ ಘಟನೆಗೆ ಗಂಭೀರವಾಗಿ ಸ್ಪಂದಿಸಿದ್ದು, ಇಂತಹ ಕೃತ್ಯಗಳಿಗೆ ತಡೆ ಹಾಕಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಕಂಡಕ್ಟರ್ಗಳು ಪೀಕಿರುವ ಹಣ ಎಷ್ಟು?
- ಸೂರ್ಯನಾರಾಯಣ- ಡಿಪೋ- 18, ಡ್ರೈವರ್ ಕಂ ಕಂಡಕ್ಟರ್ : 54,290 ರೂ.
- ಬೊಮ್ಮಲಿಂಗೇಶ್ ಸಿ.- ಡಿಪೋ- 18, ಡ್ರೈವರ್ ಕಂ ಕಂಡಕ್ಟರ್: 16,404 ರೂ.
- ಬ್ರಿಜೇಶ್ ಬಾಬು- ಡಿಪೋ- 51, ಡ್ರೈವರ್ ಕಂ ಕಂಡಕ್ಟರ್: 9,795 ರೂ.
- ಮೋಹನ್- ಡಿಪೋ- 18, ಡ್ರೈವರ್ ಕಂ ಕಂಡಕ್ಟರ್: 6,117 ರೂ.
ಇನ್ನು ಈ ಕಿಲಾಡಿ ಕಂಡಕ್ಟರ್ಗಳು ಡಿಪೋದಿಂದ ಬಸ್ಗಳು ಹೊರಗೆ ಬರ್ತಿದ್ದಂತೆ ಬಿಎಂಟಿಸಿಯ ಯುಪಿಐ ಕ್ಯೂಆರ್ ಕೋಡ್ಗಳನ್ನು ಕಿತ್ತು ಇಟ್ಟುಕೊಳ್ಳುತ್ತಿದ್ದರು. ಪ್ರಯಾಣಿಕರು ಯುಪಿಐ ಪೇಮೆಂಟ್ ಮಾಡಿ ಟಿಕೆಟ್ ಖರೀದಿ ಮಾಡಬೇಕು ಎಂದು ಕೇಳಿದಾಗ, ತಮ್ಮ ಮೊಬೈಲ್ನಲ್ಲಿರುವ ಸ್ವಂತ ಅಕೌಂಟ್ನ ಕ್ಯೂಆರ್ ಕೋಡ್ ನೀಡಿ ಹಣ ಹಾಕಿಸಿಕೊಳ್ಳುತ್ತಿದ್ದರು. ಈ ಬಗ್ಗೆ ಆರೋಪ ಕೇಳಿ ಬಂದ ಹಿನ್ನೆಲೆ ಬಿಎಂಟಿಸಿಯ ಸೆಕ್ಯೂರಿಟಿ ಅಧಿಕಾರಿಗಳು ತಪಾಸಣೆ ಮಾಡಿದಾಗ ಹತ್ತಕ್ಕೂ ಹೆಚ್ಚು ಕಂಡಕ್ಟರ್ಗಳು ತಗ್ಲಾಕೊಂಡಿದ್ದು, ಪ್ರತಿಯೊಬ್ಬರ ಅಕೌಂಟ್ ನಲ್ಲಿ 10ರಿಂದ 50 ಸಾವಿರ ರೂಪಾಯಿವರೆಗೆ ಯುಪಿಐ ವಹಿವಾಟು ನಡೆದಿರೋದು ಬಯಲಾಗಿದೆ. ಆ ಸಂಬಂಧ ಸದ್ಯ ನಾಲ್ಕು ಜನರನ್ನು ಸಸ್ಪೆಂಡ್ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿ ಮನೆಗೆ ಹೋಗೋದು ಫಿಕ್ಸ್ ಎನ್ನಲಾಗಿದೆ. ಇಂತಹುದೇ ಘಟನೆ ಸಂಬಂಧ ಈ ಹಿಂದೆಯೂ ಕೆಲವರನ್ನು ಬಿಎಂಟಿಸಿ ಅಮಾನತು ಮಾಡಿತ್ತೆಂಬುದು ಇಲ್ಲಿ ಗಮನಾರ್ಹ.
ಇದನ್ನೂ ಓದಿ : ನವಜಾತ ಶಿಶುವನ್ನು ಕಾಫಿ ತೋಟದಲ್ಲಿ ಬಿಟ್ಟು ಹೋದ ಪೋಷಕರು!



















