ಗದಗ: ರಾಜ್ಯ ಕಾಂಗ್ರೆಸ್ ನಲ್ಲಿ ಪವರ್ ಶೇರಿಂಗ್ ದೊಡ್ಡ ಸುದ್ದಿಯಾಗಿ ಪರಿಣಮಿಸಿದೆ. ಹೀಗಾಗಿ ಚರ್ಚೆಗಳು ಕೂಡ ಆರಂಭವಾಗಿವೆ. ಈ ಮಧ್ಯೆ ಹಲವರು ಡಿಕೆಶಿ ಸಿಎಂ ಆಗಲಿ ಎಂದು ಬ್ಯಾಟ್ ಬೀಸುತ್ತಿದ್ದು, ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಶ್ರೀ ಭವಿಷ್ಯವನ್ನೇ ನುಡಿದಿದ್ದಾರೆ.
ಸಿದ್ದರಾಮಯ್ಯ (Siddaramaiah) ಇರೋವರೆಗೂ ಅವರ ಸ್ಥಾನ ಕಿತ್ತುಕೊಳ್ಳಲು ಆಗುವುದಿಲ್ಲ. ಹಾಲುಮತ (Halumatha) ಸಮಾಜಕ್ಕೆ ಅಧಿಕಾರ ಬಂದರೆ ಸುಲಭವಾಗಿ ಕಿತ್ತುಕೊಳ್ಳಲು ಆಗುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ನಾವು ಹೇಳಿದ್ದು ಕೇವಲ ವ್ಯಕ್ತಿಯ ಚಿಂತನೆ ಅಲ್ಲ, ಸಮಗ್ರ ಭವಿಷ್ಯದ ಚಿಂತನೆ. ವಿಜಯನಗರ ಸಾಮ್ರಾಜ್ಯವನ್ನು ಕಟ್ಟಿದವರು ಹಕ್ಕಬುಕ್ಕರು. ಇವತ್ತಿಗೂ ವಿಜಯನಗರ ಸಾಮ್ರಾಜ್ಯದ ಹೆಸರು ಚಿರಸ್ಥಾಯಿಯಾಗಿದೆ. ಆ ಸಾಮ್ರಾಜ್ಯ ಕೊಡುಗೆ, ನೆನಪು, ಮೈಸೂರು ದಸರಾ ವಿಜಯನಗರ ಸಾಮ್ರಾಜ್ಯದ ಅರಸರುಗಳ ಕೊಡುಗೆ ಸಾಕಷ್ಟಿದೆ. ಹಕ್ಕ-ಬುಕ್ಕರು ಹಾಲುಮತ ಸಮಾಜದವರು. ಆ ಸಮಾಜಕ್ಕೆ ಅಧಿಕಾರ ಬಂದರೆ ಸುಲಭವಾಗಿ ಕಿತ್ತುಕೊಳ್ಳಲು ಆಗುವುದಿಲ್ಲ. ಹೀಗಾಗಿ ಸಿದ್ದರಾಮಯ್ಯ ಅವರ ಅಧಿಕಾರ ಕಿತ್ತುಕೊಳ್ಳುವುದು ಅಷ್ಟು ಸುಲಭವಲ್ಲ ಎಂದಿದ್ದಾರೆ.
ಸಮಾಜದ ಮೇಲೆ, ರಾಜ್ಯದ ಮೇಲೆ ಒಳ್ಳೆ ಕೆಲಸ ಮಾಡುವ ಜನರಿಗೆ ಕೆಡುಕು ಆಗುವುದು ಕಷ್ಟ. ಹಾಲುಮತ ಸಮಾಜದ ಸಿದ್ದರಾಮಯ್ಯ ಈಗ ಅಧಿಕಾರದಲ್ಲಿದ್ದಾರೆ. ಅವರಿಂದ ಅಧಿಕಾರ ಕಿತ್ತುಕೊಳ್ಳುವುದು ಕಷ್ಟ. ವಿಜಯನಗರ ಸಾಮ್ರಾಜ್ಯದ ಉದಾಹರಣೆ ಇಟ್ಟು ಸಾಮಾನ್ಯ ಭವಿಷ್ಯ ಜ್ಞಾನವನ್ನ ಹೇಳಿದ್ದೇನೆ. ಬೇರೆಯವರು ಅದನ್ನೆಲ್ಲಾ ಮಾಡಿಲ್ಲ ಅಂತಾ ಅಲ್ಲ. ಬೇರೆ ಸಮಾಜದವರೂ ಮಾಡಿದ್ದಾರೆ. ಆ ಸಮಾಜದ ಬಗ್ಗೆ ನಮಗೆ ಬೇರೆ ಅಭಿಪ್ರಾಯ ಇಲ್ಲ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ 5 ವರ್ಷ ಆಳಿದ್ದಾರೆ. ಯಾರೂ ಅವರ ಸ್ಥಾನ ಕಿತ್ತುಕೊಳ್ಳಲು ಆಗಲಿಲ್ಲ. ಅಲ್ಲಾಳರೊಂಭತ್ತು ಪಟ್ಟ, ಗೊಲ್ಲಾಳರೊಂಭತ್ತು ಪಟ್ಟ. ಅಲ್ಲಾಳ, ಗೊಲ್ಲಾಳ, ಬಲ್ಲಾಳ ಅಂತಾ ಕರೆಯುತ್ತಾರೆ. ಅಲ್ಲಾಳರಾದ ಮಹಮ್ಮದೀಯರು ಈ ದೇಶವನ್ನು 9 ಪಟ್ಟ ಆಳಿದರು. ಬಲ್ಲಾಳರು ಅಂದ್ರೆ ಪಾಳೇಗಾರರು, ಪಾಳೆ ಪಟ್ಟುಗಳು ಎಲ್ಲರೂ 9 ಪಟ್ಟ ಆಳಿದರು. ಗೊಲ್ಲಾಳರು ಅಂದ್ರೆ ಯದು ವಂಶಸ್ಥರು. ಮೈಸೂರು ಒಡೆಯರು ಇವರೂ 9 ಪಟ್ಟ ಆಳಿದರು. ನಂತರ ಪ್ರಜಾಪ್ರಭುತ್ವದ ಪಟ್ಟ ಬಂತು ಎಂದು ಶ್ರೀಗಳು ಹೇಳಿದ್ದಾರೆ.
ರಾಷ್ಟ ರಾಜಕಾರಣದಲ್ಲಿ ಸುನಾಮಿ ಆಗುತ್ತದೆ. ರಾಷ್ಟ್ರ ರಾಜಕಾರಣದಲ್ಲಿ ರಾಜಕೀಯ ಸುನಾಮಿಯಾಗುವ ಲಕ್ಷಣಗಳು ಬಹಳ ಇದ್ದಾವೆ. ರಾಜ್ಯಕ್ಕೆ ಮಳೆ, ಬೆಳೆ ಕೊರತೆ ಇಲ್ಲ. ಪ್ರಕೃತಿ ದೋಷಗಳು, ಹಿಮಪಾತ, ಭೂಕಂಪ, ಸುನಾಮಿಗಳಂತಹ ಘಟನೆಗಳು ನಡೆಯುತ್ತವೆ ಎಂದು ಭವಿಷ್ಯ ನುಡಿದಿದ್ದಾರೆ.