ರಸ್ತೆಗಳಲ್ಲಿ ಗುಂಡಿಯೋ? ಅಥವಾ ಗುಂಡಿಯೊಳಗೆ ರಸ್ತೆ ಇದೆಯೋ? ಎಂಬ ಅನುಮಾನ ಸಿಲಿಕಾನ್ ಸಿಟಿಯಲ್ಲಿನ ರಸ್ತೆಗಳನ್ನು ನೋಡಿದ ಮೇಲೆ ಎಲ್ಲರಿಗೂ ತಲೆಯಲ್ಲಿ ಬರುತ್ತಿದೆ. ಸಾರ್ವಜನಿಕರು ಗುಂಡಿ ವಿಷಯದಲ್ಲಿ ಸರ್ಕಾರ ಹಾಗೂ ಬಿಬಿಎಂಪಿ ಕಣ್ಣು ತೆರೆಸಲು ಹಲವಾರು ರೀತಿಯಲ್ಲಿ ವಿನೂತನ ಪ್ರಯತ್ನ ಮಾಡುತ್ತಲೇ ಇದ್ದಾರೆ. ಆದರೂ ಪರಿಹಾರ ಮಾತ್ರ ಸಿಗುತ್ತಿಲ್ಲ.
ಅದೇ ರೀತಿ ಈಗ ಬೆಂಗಳೂರಿಗರು ವಿಡಿಯೋ ಪೋಸ್ಟ್ ಮಾಡಿ ಗುಂಡಿ ಮುಚ್ಚುವಂತೆ ಮನವಿ ಮಾಡಿದ್ದಾರೆ. ಗರ್ಭಿಣಿಯರಿಗೆ ಉಚಿತ ಹೆರಿಗೆಯಾಗ ಬೇಕಿದ್ದಲ್ಲಿ ಈ ರಸ್ತೆಯನ್ನು ಬಳಸಿ ಅಂತ ವಿಡಿಯೋ ಪೋಸ್ಟ್ ಮಾಡಲಾಗಿದೆ. ಈ ಮೂಲಕ ಬ್ರ್ಯಾಂಡ್ ಬೆಂಗಳೂರು ಮಾನ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಹರಾಜಾಗಿದೆ.
ಬೆಂಗಳೂರಿನ ರಸ್ತೆಗಳಲ್ಲಿ ಗರ್ಭಿಣಿಯರು ಓಡಾಡುವ ಮುನ್ನ ಹುಷಾರ್. ಮತ್ತೆ ಬಿಬಿಎಂಪಿಯ ಕಳಪೆ ಕಾಮಗಾರಿ ಬಟಾ ಬಯಲಾಗಿದೆ ಎಂದು ಸರ್ಜಾಪುರ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಮಾಡಿರುವ ಪೋಸ್ಟ್ ಈಗ ವೈರಲ್ ಆಗುತ್ತಿದೆ. ಈ ಪೋಸ್ಟ್ ಗೆ ಜನರು ಕೂಡ ಭಿನ್ನ, ವಿಭಿನ್ನವಾಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಗರ್ಭಿಣಿ ಸ್ತ್ರೀಯರು ಯಾವುದೇ ಕಾರಣಕ್ಕೂ ಈ ರಸ್ತೆಗಳನ್ನು ಬಳಸಬೇಡಿ. ಏಳೆಂಟು ತಿಂಗಳ ಗರ್ಭಿಣಿಯರು ಸಂಚರಿಸಿದರೆ ಸ್ಪಾಟ್ ನಲ್ಲೇ ಹೆರಿಗೆಯಾಗುವುದು ಪಕ್ಕಾ ಎಂದು ಪೋಸ್ಟ್ ನಲ್ಲಿ ಬರೆಯಲಾಗಿದೆ. ಈ ಪೋಸ್ಟ್ ಸಾಕಷ್ಟು ವೈರಲ್ ಆಗುತ್ತಿದೆ.