ಬೆಂಗಳೂರು : ಷೇರು ಮಾರುಕಟ್ಟೆಯಲ್ಲಿ ರಕ್ತಪಾತ ಮುಂದುವರಿದಿದೆ. ಹೂಡಿಕೆದಾರರು ಲಕ್ಷಾಂತರ ಕೋಟಿ ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ. ಮ್ಯೂಚುವಲ್ ಫಂಡ್ ಹೂಡಿಕೆ ಮಾಡಿದವರಿಗೂ ನಷ್ಟವಾಗುತ್ತಿದೆ. ಹಾಗಾಗಿ, ಹೂಡಿಕೆದಾರರು ಎಫ್ಡಿಯಂತಹ ಸುರಕ್ಷಿತ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಆದರೆ, ಎಫ್ಡಿಯನ್ನು ಪೋಸ್ಟ್ ಆಫೀಸ್ನಲ್ಲಿ ಮಾಡಿದರೆ ರಾಷ್ಟ್ರೀಕೃತ ಬ್ಯಾಂಕ್ಗಳಿಗಿಂತ ಹೆಚ್ಚಿನ ಬಡ್ಡಿ ಲಭಿಸಲಿದೆ.
ಹೌದು.. ಎಸ್ಬಿಐ ಸೇರಿ ಹಲವು ಬ್ಯಾಂಕ್ಗಳಂತೆ ಪೋಸ್ಟ್ ಆಫೀಸ್ನಲ್ಲಿ ಟೈಮ್ ಡೆಪಾಸಿಟ್ (ಟಿಡಿ) ಎಂಬ ಯೋಜನೆ ಇದೆ. ಈ ಯೋಜನೆಯಲ್ಲಿ ನೀವೇನಾದರೂ ಒಂದು ಲಕ್ಷ ರೂಪಾಯಿಯನ್ನು ಒಂದು ವರ್ಷದವರೆಗೆ ಟಿಡಿ ಮಾಡಿದರೆ, ನಿಮಗೆ ಶೇ.6.9ರಷ್ಟು ಬಡ್ಡಿಯ ಲಾಭ ಸಿಗಲಿದೆ. ಅಂದರೆ, ಒಂದು ವರ್ಷದಲ್ಲಿ ನಿಮಗೆ 6,900 ರೂಪಾಯಿ ರಿಟರ್ನ್ಸ್ ಸಿಗಲಿದೆ. ಇದು ಬೇರೆ ಬ್ಯಾಂಕ್ ಗಳಿಗಿಂತ ಹೆಚ್ಚಿನ ಬಡ್ಡಿದ ಎಂಬುದನ್ನು ಹೂಡಿಕೆದಾರರು ಗಮನಿಸಬೇಕಿದೆ.
ಅದೇ ರೀತಿ, ನೀವು ಎರಡು ವರ್ಷದವರೆಗೆ ಹೂಡಿಕೆ ಮಾಡಿದರೆ ಶೇ.7ರಷ್ಟು ಬಡ್ಡಿದರ ಲಭಿಸುತ್ತದೆ. ಇನ್ನು 3 ವರ್ಷದವರೆಗೆ ಹೂಡಿಕೆ ಮಾಡಿದರೆ ಶೇ.7.1ರಷ್ಟು ಬಡ್ಡಿದರ ಲಭಿಸುತ್ತದೆ. ಇದು ಕೇಂದ್ರ ಸರ್ಕಾರದ ಬೆಂಬಲವಿರುವ ಹೂಡಿಕೆಯಾಗಿರುವ ಕಾರಣ ಸುರಕ್ಷಿತವೂ ಆಗಿದೆ. ಇನ್ನು, ಹಿರಿಯ ನಾಗರಿಕರಿಗೆ ಹೆಚ್ಚಿನ ಬಡ್ಡಿ ಲಭಿಸುತ್ತದೆ.
ಸಾಮಾನ್ಯ ನಾಗರಿಕರಿಗೆ ಎಸ್ ಬಿಐನಲ್ಲಿ ಒಂದು ವರ್ಷದ ಅವಧಿಗೆ ಎಫ್ ಡಿ ಇರಿಸಿದರೆ ಶೇ.6.25ರಷ್ಟು ಬಡ್ಡಿ ಇದೆ. ಅಂದರೆ, ನೀವು ಎಸ್ ಬಿಐನಲ್ಲಿ ಒಂದು ವರ್ಷದ ಅವಧಿಗೆ 1 ಲಕ್ಷ ರೂಪಾಯಿಯನ್ನು ಎಫ್ ಡಿ ಇರಿಸಿದರೆ, ಒಂದು ವರ್ಷದ ನಂತರ ನಿಮಗೆ 6,250 ರೂಪಾಯಿ ಬಡ್ಡಿ ಲಭಿಸುತ್ತದೆ. ಇದು ಪೋಸ್ಟ್ ಆಫೀಸ್ ಬಡ್ಡಿದರಕ್ಕಿಂತ ಕಡಿಮೆಯಾಗಿದೆ. ಎಸ್ ಬಿಐನಲ್ಲಿ ಎರಡು ವರ್ಷದ ಎಫ್ ಡಿಗೆ ಶೇ.6.45ರಷ್ಟು ಹಾಗೂ 5 ವರ್ಷಕ್ಕೆ ಶೇ.7.05ರಷ್ಟು ಬಡ್ಡಿ ನೀಡಲಾಗುತ್ತದೆ.
ಇದನ್ನೂ ಓದಿ : ತಿಂಗಳಿಗೆ 100 ರೂ. ಪಾವತಿಸಿದರೆ ತಿಂಗಳಿಗೆ 3 ಸಾವಿರ ರೂ. ಪಿಂಚಣಿ : ಏನಿದು ಸ್ಕೀಮ್?



















