ಬೆಂಗಳೂರು: ಬದಲಾದ ಜೀವನಶೈಲಿ, ಹೆಚ್ಚಾದ ಹಣದುಬ್ಬರದಿಂದಾಗಿ ಎಷ್ಟು ಸಂಬಳ, ಆದಾಯ ಇದ್ದರೂ ತುಂಬ ಜನರ ಕೈಯಲ್ಲಿ ದುಡ್ಡೇ ಉಳಿಯೋದಿಲ್ಲ. ಅವರಿಗೆ ಉಳಿತಾಯ ಮಾಡಬೇಕು ಎಂದರೂ ಕೆಲವೊಮ್ಮೆ ಹಿಂದೇಟು ಹಾಕುತ್ತಾರೆ. ಆದರೆ, ಕಡಿಮೆ ಸಂಬಳ ಅಥವಾ ಆದಾಯದವರು ಕೂಡ ತಿಂಗಳಿಗೆ 5 ಸಾವಿರ ರೂಪಾಯಿ ಹೂಡಿಕೆ ಮಾಡಬಹುದು. ಆದರೆ, ತಿಂಗಳಿಗೆ 5 ಸಾವಿರ ರೂ. ಹೂಡಿಕೆ ಮಾಡಲು ಆರ್ ಡಿ ಒಳ್ಳೆಯದೋ ಅಥವಾ ಎಸ್ಐಪಿ ಒಳ್ಳೆಯದೋ ಎಂಬ ಗೊಂದಲವೂ ತುಂಬ ಜನರಿಗೆ ಇರುತ್ತದೆ. ಆದರೆ, ಯಾವುದು ಒಳ್ಳೆಯದು? ಇಲ್ಲಿದೆ ಮಾಹಿತಿ.
ಪೋಸ್ಟ್ ಆಫೀಸ್ ಆರ್ ಡಿ
ಪೋಸ್ಟ್ ಆಫೀಸಿನ ಆರ್ ಡಿ (ರಿಕರಿಂಗ್ ಡೆಪಾಸಿಟ್) ಹಾಗೂ ಮ್ಯೂಚುವಲ್ ಫಂಡ್ ಎಸ್ಐಪಿಯಲ್ಲಿ ಹಲವು ವ್ಯತ್ಯಾಸಗಳಿವೆ. ಪೋಸ್ಟ್ ಆಫೀಸ್ ಆರ್ ಡಿ ಸುರಕ್ಷಿತ ಹೂಡಿಕೆಯಾಗಿದೆ. ಇದು ಕೇಂದ್ರ ಸರ್ಕಾರದ ಬೆಂಬಲ ಇರುವ ಹೂಡಿಕೆ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಮಾಸಿಕ 5 ಸಾವಿರ ರೂ.ನಂತೆ 5 ವರ್ಷಗಳವರೆಗೆ ಹೂಡಿಕೆ ಮಾಡಿದರೆ, ನೀವು 3.5 ಲಕ್ಷ ರೂ. ಗಳಿಸಬಹುದಾಗಿದೆ.
ಪೋಸ್ಟ್ ಆಫೀಸ್ ಆರ್ ಡಿ ಹೂಡಿಕೆಯಿಂದ ಶೇ.6.7ರಷ್ಟು ರಿಟರ್ನ್ಸ್ ದೊರೆಯಲಿದೆ. ನೀವು 5 ವರ್ಷದಲ್ಲಿ 3 ಲಕ್ಷ ರೂ. ಹೂಡಿಕೆ ಮಾಡಿರುತ್ತೀರಿ. ಇದಕ್ಕೆ ಶೇ.6.7ರಷ್ಟು ರಿಟರ್ನ್ಸ್ ಎಂದರೂ ಒಟ್ಟು 3.56 ಲಕ್ಷ ರೂಪಾಯಿ ನಿಮ್ಮದಾಗುತ್ತದೆ. ಇಲ್ಲಿ ಹೂಡಿಕೆಯ ಬಗ್ಗೆ ಯಾವುದೇ ರಿಸ್ಕ್ ಇರುವುದಿಲ್ಲ.
ಮ್ಯೂಚುವಲ್ ಫಂಡ್ ಎಸ್ಐಪಿ
ಮ್ಯೂಚುವಲ್ ಫಂಡ್ ಎಸ್ಐಪಿ ಲಾಭವು ಮಾರುಕಟ್ಟೆ ಆಧಾರಿತವಾಗಿರುತ್ತದೆ. ನಷ್ಟವೂ ಉಂಟಾಗುತ್ತದೆ. ಹಾಗಾಗಿ, ಇದು ರಿಸ್ಕ್ ಹೊಂದಿರುತ್ತದೆ. 5 ವರ್ಷದವರೆಗೆ ಪ್ರತಿ ತಿಂಗಳು ನೀವು 5 ಸಾವಿರ ರೂಪಾಯಿಯನ್ನು ಎಸ್ಐಪಿಯಲ್ಲಿ ಹೂಡಿಕೆ ಮಾಡಿದರೆ ನಿಮಗೆ ಶೇ.12ರಷ್ಟು ರಿಟರ್ನ್ಸ್ ಎಂದರೂ 4.05 ಲಕ್ಷ ರೂ. ಲಭಿಸುತ್ತದೆ. ಇಲ್ಲಿ ಲಾಭದ ಪ್ರಮಾಣ ಜಾಸ್ತಿ ಇರುವ ಜತೆಗೆ ರಿಸ್ಕ್ ಕೂಡ ಜಾಸ್ತಿ ಇರುತ್ತದೆ. ಹಾಗಾಗಿ, ರಿಸ್ಕ್ ಸಾಮರ್ಥ್ಯವನ್ನು ನೋಡಿಕೊಂಡು ಹೂಡಿಕೆ ಮಾಡುವುದು ಒಳಿತು ಎನ್ನುವುದು ತಜ್ಞರ ಸಲಹೆಯಾಗಿದೆ.
ಗಮನಿಸಿ: ನಾವು ಹೂಡಿಕೆ ಕುರಿತು ಮಾಹಿತಿ ನೀಡುವ ದೃಷ್ಟಿಯಿಂದ ಮಾತ್ರ ಲೇಖನ ಪ್ರಕಟಿಸಿದ್ದೇವೆ. ಹಾಗಾಗಿ, ಇದನ್ನೂ ಹೂಡಿಕೆಗೆ ಶಿಫಾರಸು ಎಂದು ಭಾವಿಸಬಾರದು. ಯಾವುದೇ ಮಾದರಿಯ ಹೂಡಿಕೆ ಮಾಡುವ ಮೊದಲು ತಜ್ಞರನ್ನು ಸಂಪರ್ಕಿಸಿ, ಅವರಿಂದ ಸಲಹೆ-ಸೂಚನೆ ಪಡೆಯುವುದನ್ನು ಮರೆಯದಿರಿ.



















