ಬೆಂಗಳೂರು: ಪೋಸ್ಟ್ ಆಫೀಸ್ ಗಳು ಈಗ ಬ್ಯಾಂಕುಗಳಾಗಿ ಪರಿವರ್ತನೆ ಹೊಂದಿದ್ದು, ಸಣ್ಣ ಉಳಿತಾಯ ಯೋಜನೆಗಳು ಜನರಿಗೆ ಭಾರಿ ಅನುಕೂಲವಾಗಿವೆ. ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್ ರಿಸ್ಕ್ ಬೇಡ ಎನ್ನುವವರು ಪೋಸ್ಟ್ ಆಫೀಸ್ ಸಣ್ಣ ಉಳಿತಾಯ ಯೋಜನೆಗಳ ಮೊರೆ ಹೋಗುತ್ತಿದ್ದಾರೆ. ಇವು ಸುರಕ್ಷಿತವಾಗಿರುವ ಕಾರಣ ಹೆಚ್ಚಿನ ಜನ ಹೂಡಿಕೆ ಮಾಡುತ್ತಿದ್ದಾರೆ. ಈ ಸಣ್ಣ ಉಳಿತಾಯ ಯೋಜನೆಗಳಲ್ಲಿ ರಿಕರಿಂಗ್ ಡೆಪಾಸಿಟ್ ಅಥವಾ ಆರ್ ಡಿ (Post Office RD) ಹೆಚ್ಚು ಜನಪ್ರಿಯವಾಗಿದೆ.
ರಿಕರಿಂಗ್ ಡೆಪಾಸಿಟ್ ನಲ್ಲಿ ಪ್ರತಿ ತಿಂಗಳು ಕೇವಲ 5000 ರೂ. ಹೂಡಿಕೆ ಮಾಡುವ ಮೂಲಕ 8.5 ಲಕ್ಷ ರೂ.ಗಳಿಗೂ ಹೆಚ್ಚಿನ ಹಣವನ್ನು ಗಳಿಸಬಹುದಾಗಿದೆ. ಅದರಲ್ಲೂ, ಕೇಂದ್ರ ಸರ್ಕಾರವು 2023ರಲ್ಲಿ ಪೋಸ್ಟ್ ಆಫೀಸ್ ಆರ್ ಡಿ ಮೇಲಿನ ಬಡ್ಡಿದರವನ್ನು ಶೇ.6.7ಕ್ಕೆ ಏರಿಕೆ ಮಾಡಿರುವ ಕಾರಣ ಹೂಡಿಕೆಗೆಹೆಚ್ಚಿನ ರಿಟರ್ನ್ಸ್ ಕೂಡ ದೊರೆಯುತ್ತದೆ.
8.5 ಲಕ್ಷ ರೂ. ಗಳಿಕೆ ಹೇಗೆ?
ಪೋಸ್ಟ್ ಆಫೀಸ್ ನಲ್ಲಿ ಆರ್ ಡಿ ಖಾತೆ ತೆರೆದು ಪ್ರತಿ ತಿಂಗಳು 5 ಸಾವಿರ ರೂ. ಜಮೆ ಮಾಡಬೇಕು. ಇದೇ ರೀತಿ 10 ವರ್ಷಗಳವರೆಗೆ ಮಾಸಿಕ ಠೇವಣಿ ಮಾಡಿದರೆ 10 ವರ್ಷದ ನಂತರ ನಿಮ್ಮ ಹೂಡಿಕೆಯ ಮೊತ್ತವು 6 ಲಕ್ಷ ರೂ. ಆಗಿರುತ್ತದೆ. ಇದಕ್ಕೆ ಶೇ.6.7ರಷ್ಟು ಬಡ್ಡಿದರ ಲಭಿಸಿದರೆ ಬಡ್ಡಿ ಮೊತ್ತವೇ 2.54 ಲಕ್ಷ ರೂ. ಆಗುತ್ತದೆ. ಆಗ ನೀವು ಹೂಡಿಕೆ ಮಾಡಿದ ಮೊತ್ತ ಹಾಗೂ ಬಡ್ಡಿ ಸೇರಿಸಿದರೆ 8.54 ಲಕ್ಷ ರೂ. ನಿಮ್ಮ ಕೈಸೇರುತ್ತದೆ.
ನೀವು ಪೋಸ್ಟ್ ಆಫೀಸ್ ರಿಕರಿಂಗ್ ಠೇವಣಿ ಯೋಜನೆಯಲ್ಲಿ ಪ್ರತಿ ತಿಂಗಳು 5,000 ರೂಪಾಯಿಗಳನ್ನು ಹೂಡಿಕೆ ಮಾಡಿದರೆ, ಅದರ ಮುಕ್ತಾಯ ಅವಧಿಯಲ್ಲಿ ಅಂದರೆ ಐದು ವರ್ಷಗಳಲ್ಲಿ, ನೀವು ಒಟ್ಟು 3 ಲಕ್ಷ ರೂಪಾಯಿಗಳನ್ನು ಠೇವಣಿ ಮಾಡುತ್ತೀರಿ ಮತ್ತು ಶೇಕಡಾ 6.7 ರ ದರದಲ್ಲಿ, 56,830 ರೂಪಾಯಿಗಳನ್ನು ಬಡ್ಡಿ ಮೊತ್ತಕ್ಕೆ ಸೇರಿಸಲಾಗುತ್ತದೆ. ಇದರೊಂದಿಗೆ 3.56 ಲಕ್ಷ ರೂ. ನಿಮ್ಮದಾಗುತ್ತದೆ.