ನವದೆಹಲಿ : ಮಂಡ್ಯದಿಂದ ಹಿಡಿದು ಬೀದರ್ವರೆಗೆ ಕರ್ನಾಟಕದ ಒಂಬತ್ತು ಜಿಲ್ಲೆಗಳನ್ನೊಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಯೋಜನೆಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಎರಡು ವಾರಗಳ ಹಿಂದೆ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ವಾಣಿಜ್ಯ ಸಚಿವ ಪೀಯೂಶ್ ಗೋಯಲ್ ಅವರನ್ನು ಭೇಟಿಯಾಗಿ ಈ ಯೋಜನೆಯ ಪ್ರಸ್ತಾಪ ಮಾಡಿ, ಅನುಷ್ಠಾನಕ್ಕೆ ಕೋರಿದ್ದರು.
ಇದೀಗ ಕರ್ನಾಟಕದ ಕೈಗಾರಿಕೆ ಮತ್ತು ಸಾಗಣೆ ಕ್ಷೇತ್ರಗಳಿಗೆ ಪುಷ್ಟಿ ನೀಡುವ ಈ ಯೋಜನೆಗೆ ವಾಣಿಜ್ಯ ಸಚಿವರು ಸಮ್ಮತಿ ಸೂಚಿಸಿ ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ.
ಮಂಡ್ಯ, ಮೈಸೂರು, ಚಾಮರಾಜನಗರ, ಕೋಲಾರ, ಹಾಸನ, ಮಂಗಳೂರು, ಹುಬ್ಬಳ್ಳಿ ಧಾರವಾಡ, ರಾಯಚೂರು ಮತ್ತು ಬೀದರ್ ಜಿಲ್ಲೆಗಳನ್ನೊಳಗೊಂಡ ಬಹಳ ವಿಸ್ತೃತವಾದ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಯೋಜನೆ ಇದಾಗಿದೆ. ನವೆಂಬರ್ 13ರಂದು ಕೈಗಾರಿಕಾ ಸಚಿವರಾದ ಹೆಚ್ಡಿಕೆ ಅವರು ಪೀಯೂಶ್ ಗೋಯಲ್ ಅವರನ್ನು ಭೇಟಿಯಾಗಿ ಈ ಯೋಜನೆ ಬಗ್ಗೆ ಚರ್ಚಿಸಿ, ಜಾರಿಗೊಳಿಸಲು ನೆರವಾಗಬೇಕೆಂದು ಮನವಿ ಮಾಡಿದ್ದರು. ಈ ಕಾರಿಡಾರ್ ನಿರ್ಮಾಣದಿಂದ ರಾಜ್ಯದಾದ್ಯಂತ ಉದ್ಯಮ ವಲಯ ಬೆಳೆಯಲು ಮತ್ತು ಉದ್ಯೋಗಾವಕಾಶ ಹೆಚ್ಚಲು ಸಾಧ್ಯವಾಗುತ್ತದೆ ಎಂಬಿತ್ಯಾದಿ ಪ್ರಯೋಜನಗಳನ್ನು ಗೋಯಲ್ ಅವರಿಗೆ ಕುಮಾರಸ್ವಾಮಿ ಅಂದು ವಿವರಿಸಿದ್ದರು.
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಕೈಗಾರಿಕಾ ಪಾರ್ಕ್ಗಳನ್ನು ನಿರ್ಮಿಸಲು ಪೂರಕವಾಗುವಂತಹ ಹಲವು ಪೂರಕ ಸಂಪನ್ಮೂಲಗಳು, ಸಾಗಣೆ ವ್ಯವಸ್ಥೆ ಇತ್ಯಾದಿ ಅಂಶಗಳಿವೆ. ಈ ಜಿಲ್ಲೆಗಳಲ್ಲಿ ಬೃಹತ್ ಮಟ್ಟದಲ್ಲಿ ಕೈಗಾರಿಕಾ ಅಭಿವೃದ್ಧಿ ಸಾಧಿಸಲು ಅವಕಾಶ ಇದೆ. ಹಾಗೆಯೇ, ರಾಜ್ಯದಲ್ಲಿ ಸಮತೋಲಿತವಾದ ಪ್ರಾದೇಶಿಕ ಬೆಳವಣಿಗೆಯೂ ಆಗುತ್ತದೆ ಎಂದು ಕುಮಾರಸ್ವಾಮಿ ಅಂದು ವಾಣಿಜ್ಯ ಸಚಿವರಿಗೆ ಮನದಟ್ಟು ಮಾಡಿದ್ದರು.
ಕೈಗಾರಿಕಾ ಪಾರ್ಕ್ಗಳನ್ನು ಸ್ಥಾಪಿಸಲು 9 ಜಿಲ್ಲೆಗಳನ್ನು ಪ್ರಸ್ತಾಪಿಸಿರುವ ಕುಮಾರಸ್ವಾಮಿ, ಕೇಂದ್ರ ಪ್ರಾಯೋಜಿತ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಯೋಜನೆಯ ಚೌಕಟ್ಟಿನಡಿ ಪರಿಗಣಿಸಬೇಕು ಎಂದೂ ಕುಮಾರಸ್ವಾಮಿ ಕೋರಿಕೊಂಡಿದ್ದರು.
ಕುಮಾರಸ್ವಾಮಿ ಅವರ ಈ ಪ್ರಸ್ತಾವನೆಯನ್ನು ಸ್ವೀಕರಿಸಿದ್ದ ಪೀಯೂಶ್ ಗೋಯಲ್, ಕರ್ನಾಟಕದ ಅಭಿವೃದ್ದಿಗೆ ಇದು ಪರಿವರ್ತನಾತ್ಮಕ ಪರಿಕಲ್ಪನೆ ಎಂದು ಶ್ಲಾಘಿಸಿದ್ದರು. ರಾಜ್ಯದ ಪ್ರಾದೇಶೀಕ ಸಮತೋಲಿತ ಕೈಗಾರಿಕಾ ಅಭಿವೃದ್ಧಿಗೆ ಇದು ಪೂರಕವಾಗಿದೆ. ರಚನಾತ್ಮಕವಾದ ಕೇಂದ್ರದ ನೀತಿಗಳನ್ನು ಕಾರ್ಯರೂಪಕ್ಕೆ ತರಲು ಈ ಯೋಜನೆ ಪೂರಕವಾಗಿದೆ ಎಂದು ಕುಮಾರಸ್ವಾಮಿ ಅವರಿಗೆ ಪತ್ರದ ಮೂಲಕ ಗೋಯಲ್ ಉತ್ತರಿಸಿದ್ದಾರೆ. ಈ ಮೂಲಕ ರಾಜ್ಯದ 9 ಜಿಲ್ಲೆಗಳಲ್ಲಿ ಕೈಗಾರಿಕಾ ಪಾರ್ಕ್ ನಿರ್ಮಿಸುವ ಆಶಯ ಈಡೇರುವ ಸಾಧ್ಯತೆ ಇದೆ.
ಇದ್ನೂ ಓದಿ : ಬಾಸ್ಕೆಟ್‌ಬಾಲ್ ಕಂಬ ಬಿದ್ದು 16 ವರ್ಷದ ರಾಷ್ಟ್ರಮಟ್ಟದ ಆಟಗಾರ ದುರಂತ ಸಾವು.. ಸಿಸಿಟಿವಿಯಲ್ಲಿ ದೃಶ್ಯ ಸೆರೆ



















