ಬೆಂಗಳೂರು: ಕಸದ ವಿಲೇವಾರಿ ಕುರಿತ ನಕಲಿ ಬಿಲ್ ಸಂಬಂಧಿಸಿ ಸ್ಥಳೀಯ ಶಾಸಕ ದಿನೇಶ್ ಗುಂಡೂರಾವ್ ಅವರಿಗೆ ಮಾಹಿತಿ ಇಲ್ಲವೆಂದರೆ ಅದನ್ನು ನಂಬುವುದು ಹೇಗೆ ಎಂದು ಬಿಜೆಪಿ ರಾಜ್ಯ ವಕ್ತಾರ ಪ್ರಕಾಶ್ ಪ್ರಶ್ನಿಸಿದ್ದಾರೆ.
ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ 3 ವರ್ಷಗಳಿಂದ ಕಸದ ಗುತ್ತಿಗೆಯಲ್ಲಿ 2 ಕೋಟಿ 37 ಲಕ್ಷ ನಕಲಿ ಬಿಲ್ ಮಾಡಿ ಹಣ ಪಡೆದ ಕುರಿತು ತನಿಖೆಗೆ ಆದೇಶಿಸಲಾಗಿದೆ. ಇದು ಸಣ್ಣ ಮೊತ್ತವಲ್ಲ. ಶಾಸಕರ ಗಮನಕ್ಕೆ ಬರದೆ ಯಾವುದೇ ಬಿಲ್ ಪಾವತಿ ಆಗುವುದಿಲ್ಲ ಎಂದು ಆರೋಪಿಸಿದ್ದಾರೆ.
ತಮ್ಮ ಕ್ಷೇತ್ರದಲ್ಲಿ ಕಸ ವಿಲೇವಾರಿ ಆಗುತ್ತಿದೆಯೇ? ಸಮರ್ಪಕವಾಗಿ ಆಗುತ್ತಿದೆಯೇ? ಜನರಿಗೆ ಅನುಕೂಲಕರ ಆಗುತ್ತಿದೆಯೇ ಎಂಬುದಕ್ಕೆ ಗಮನ ಕೊಡದೇ ಇವರು ಕರ್ತವ್ಯದಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ.
ಸರ್ಕಾರ ಬಿಬಿಎಂಪಿ ವಿಶೇಷ ಕಮೀಷನರ್ ವಿಕಾಸ್ ಕಿಶೋರ್ ಎಂಬುವರನ್ನು ತನಿಖೆಗೆ ನೇಮಿಸಿದೆ. ಅಧಿಕಾರಿಗಳು ಕೈಜೋಡಿಸದೆ ಗುತ್ತಿಗೆದಾರ ಈ ಮೊತ್ತ ಪಡೆಯಲು ಸಾಧ್ಯವೇ ಇಲ್ಲ ಎಂದು ಪ್ರಶ್ನಿಸಿದ್ದಾರೆ.
ಎಲ್ಲರೂ ಸೇರಿ 2 ಕೋಟಿ ನುಂಗಿ ಹಾಕಿದಂತಿದೆ. ತನಿಖೆ ಮಾಡಿದರೆ ಅದೆಷ್ಟು ಕೋಟಿ ಆಚೆ ಬರುತ್ತದೋ ಗೊತ್ತಿಲ್ಲ ಎಂದು ತಿಳಿಸಿದರು. ಈಚೆಗೆ ಗೇಟ್ ಬಿದ್ದು ಮಗು ಸತ್ತುಹೋಗಿತ್ತು. ಕಳಪೆ ಕಾಮಗಾರಿಯಿಂದ ಹೀಗಾಗಿದೆ. ಗುತ್ತಿಗೆದಾರರ ಮೇಲೆ ಕೊಲೆ ಕೇಸ್ ಹಾಕಿಲ್ಲ; ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕಳಪೆ ಕಾಮಗಾರಿಗಳು ನಡೆಯುತ್ತಿವೆ. ಅದಕ್ಷತೆಯಿಂದ ಕೆಲಸಗಳು ನಡೆಯುತ್ತಿವೆ ಎಂದು ಆರೋಪಿಸಿದ್ದಾರೆ.
ದಿನೇಶ್ ಗುಂಡೂರಾವ್ ಅವರ ಆರೋಗ್ಯ ಇಲಾಖೆಯಲ್ಲೂ ಅದೇ ನಡೆದಿದೆ. ದಿನನಿತ್ಯ ಬಾಣಂತಿಯರ ಸಾವು ಸಂಭವಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್, ಕೇಂದ್ರ ಜಿಲ್ಲಾ ಅಧ್ಯಕ್ಷ ಸಪ್ತಗಿರಿ ಗೌಡ, ಉತ್ತರ ಜಿಲ್ಲಾ ಅಧ್ಯಕ್ಷ ಹರೀಶ್ ಈ ಸಂದರ್ಭದಲ್ಲಿದ್ದರು.