ತಮಿಳುನಾಡಿನಲ್ಲೀಗ ರಾಜಕೀಯ ಹವಾ ಶುರುವಾಗಿದೆ. ಮುಂದಿನ ವರ್ಷ ತಮಿಳು ನೆಲದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈಗಾಗಲೇ ಎಲ್ಲರಿಗಿಂತ ಮುಂಚೆ ಎನ್ನುವಂತೆ ತಯಾರಿ ಆರಂಭಿಸಿರುವ ಬಿಜೆಪಿ ರಂಗತಾಲೀಮು ಶುರುಮಾಡಿದೆ. ಆಡಳಿತಾರೂಢ ಸ್ಟಾಲಿನ್ ಸರ್ಕಾರವನ್ನು ಕಿತ್ತೆಸೆದು ಹೊಸ ಸರ್ಕಾರ ರಚಿಸುವ ತಂತ್ರಗಾರಿಕೆಯನ್ನು ಬಿಜೆಪಿ ಶುರುಮಾಡಿದೆ. ಈ ನಿಟ್ಟಿನಲ್ಲೇ ಜಾತಿ ಗಣಿತದ ಲೆಕ್ಕದಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೈನಾರ್ ನಾಗೇಂದ್ರನ್ ರನ್ನ ಆಯ್ಕೆ ಮಾಡಲಾಗಿದೆ. ಇತ್ತ ಗೌಂಡರ್ ಸಮುದಾಯದ ಪಳನಿಸ್ವಾಮಿ ಮಿತ್ರ ಪಕ್ಷ ಎಐಎಡಿಎಂಕೆ ಸಾರಥ್ಯ ವಹಿಸಿದ್ದಾರೆ. ಇದರ ನಡುವೆ, ಕಳೆದ ಚುನಾವಣೆಯಲ್ಲಿ ಹರಿದು ಹಂಚಿಹೋಗಿದ್ದ ಮಿತ್ರಕೂಟವನ್ನೀಗ ಒಂದಾಗಿಸೋ ಕಾರ್ಯ ಆರಂಭಿಸಲಾಗಿದೆ.
ಪಿಎಂಕೆ. ಡಿಎಂಡಿಕೆ ದೋಸ್ತಿ ಗಳಿಸಲು ಕಸರತ್ತು!
ಮೊನ್ನೆಯಷ್ಟೇ ಐಎಡಿಎಂಕೆ ಜೊತೆ ಅಧಿಕೃತವಾಗಿ ಬಿಜೆಪಿ ಮೈತ್ರಿ ಘೋಷಿಸಿಕೊಂಡಿದೆ. ಖುದ್ದು ಚೆನ್ನೈಗೆ ಬಂದ ಅಮಿತ್ ಶಾ, ತಮ್ಮ ಹಳೆಯ ಗೆಳೆಯ ಪಳನಿಸ್ವಾಮಿ ಜೊತೆ ಕಾಣಿಸಿಕೊಂಡು ದೋಸ್ತಿಯನ್ನು ಅಖೈರು ಮಾಡಿದ್ದರು. ಇದರ ಬೆನ್ನಲ್ಲೇ ಇದೀಗ ಮೈತ್ರಿ ಕೂಟವನ್ನು ಮತ್ತಷ್ಟು ಬಲಿಷ್ಠಗೊಳಿಸೋ ನಿಟ್ಟಿನಲ್ಲಿ ವ್ಯೂಹ ರೂಪಿಸಲಾಗುತ್ತಿದೆ. ಈ ಹಿಂದೆ ಮೈತ್ರಿಕೂಟದಲ್ಲಿದ್ದ ಪಿಎಂಕೆ ಹಾಗೂ ಡಿಎಂಡಿಕೆ ನಾಯಕರನ್ನು ಬಿಜೆಪಿ ಆಹ್ವಾನಿಸಿದೆ.
ಪಿಎಂಕೆ ಇಬ್ಭಾಗವಾದ್ರೆ ಯಾರಿಗೆ ಲಾಭ?
ಅಮಿತ್ ಶಾ ಭೇಟಿ ಬೆನ್ನಲ್ಲೇ ತಮಿಳುನಾಡಿನ ಪಿಎಂಕೆ ಪಾರ್ಟಿಯಲ್ಲಿ ಮಹತ್ತರ ನಿರ್ಧಾರ ಕೈಗೊಳ್ಳಾಗಿತ್ತು. ಪಕ್ಷದ ಅಧ್ಯಕ್ಷ ಹುದ್ದೆಯಿಂದ ಸ್ವಂತ ಮಗನನ್ನೇ ಕೆಳಗಿಳಿಸಿ ರಾಮದಾಸ್ ತಾವೇ ಕುರ್ಚಿ ಏರಿದ್ರು. ಬಿಜೆಪಿ ಜೊತೆ ದೋಸ್ತಿಗೆ ತುದಿಗಾಲಲ್ಲಿ ನಿಂತಿದ್ದ ಅನ್ಬುಮಣಿ ನಡೆಯೇ ಪದಚ್ಯುತಿಗೆ ಕಾರಣ ಎನ್ನಲಾಗಿತ್ತು. ಅಷ್ಟೇ ಅಲ್ಲಾ ದ್ರಾವಿಡ ಪಕ್ಷದೊಂದಿಗೆ ಮಾತ್ರ ಮೈತ್ರಿ ಅಂತಲೂ ರಾಮದಾಸ್ ಘೋಷಿಸಿದ್ರು. ಹೀಗಿದ್ರೂ ಬಿಜೆಪಿ ಈಗ ಮುಕ್ತ ಆಹ್ವಾನ ನೀಡಿದೆ. ಆದ್ರೆ ಪಿಎಂಕೆ ನಡೆ ಎತ್ತ, ಅಪ್ಪ-ಮಗನ ನಡುವೆಯೇ ಕಲಹ ಶುರುವಾಗಿದೆಯಾ. ಅಪ್ಪ ದ್ರಾವಿಡ ಬಳಗ ಮಗ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ್ರೆ ಮುಂದೇನು ಅನ್ನೋ ಚರ್ಚೆ ಕೂಡಾ ನಡೆದಿದೆ. ಇತ್ತ ಡಿಎಂಡಿಕೆ ಕೂಡಾ ದೋಸ್ತಿಗು ಮುನ್ನವೇ ಸ್ಥಾನ ಹಂಚಿಕೆ ಇತ್ಯರ್ಥವಾಗ್ಲಿ ಅಂತಾ ಪಟ್ಟು ಹಿಡಿದಿದೆ. ಒಟ್ನಲ್ಲಿ 234 ವಿಧಾನಸಬಾ ಕ್ಷೇತ್ರಗಳ ಅಖಾಡದರಲ್ಲಿ ಯಾರಿಗೆ ಎಷ್ಟು ಸ್ಥಾನ ಅನ್ನೋದಿನ್ನೂ ಸ್ಪಷ್ಟವಾಗಿಲ್ಲ. ಆದ್ರೆ, ಕೇಸರಿ ಪಡೆಯ ಮೈತ್ರಿ ಭದ್ರಗೊಳಿಸಿಕೊಳ್ಳೋ ಕೆಲಸ ಮಾತ್ರ ಉತ್ತುಂಗದಲ್ಲಿದೆ.