ಬೆಂಗಳೂರು: ನಗರದಲ್ಲಿ ಮಾದಕ ವಸ್ತುಗಳ ಸಂಗ್ರಹ ಮತ್ತು ಮಾರಾಟ ಮತ್ತಿತರ ಅಪರಾಧ ಪ್ರಕರಣಗಳಲ್ಲಿ ವಿದೇಶಿ ಪ್ರಜೆಗಳ ಕೈವಾಡ ಹೆಚ್ಚಾಗಿ ಕಂಡುಬರುತ್ತಿದ್ದು, ವಿದೇಶಿಗರು ಹೆಚ್ಚು ನೆಲೆಸಿರುವ ಈಶಾನ್ಯ ಹಾಗೂ ಪೂರ್ವ ವಿಭಾಗದಲ್ಲಿನ ಮನೆಗಳ ಮಾಲೀಕರಿಗೆ ಸಾರ್ವಜನಿಕ ಪ್ರಕಟಣೆಯ ಮೂಲಕ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಅಗತ್ಯ ದಾಖಲಾತಿಗಳನ್ನು ಪಡೆದುಕೊಳ್ಳದ ಹಾಗೂ ಸಿ ಫಾರ್ಮ್ ಸಲ್ಲಿಸದ ಮನೆಗಳ ಮಾಲೀಕರ ವಿರುದ್ಧ ‘ರಿಜಿಸ್ಟ್ರೇಷನ್ ಆಫ್ ಫಾರಿನರ್ಸ್ ಆ್ಯಕ್ಟ್’ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಕಡ್ಡಾಯ ನಿಯಮಗಳು:
- ಭಾರತೀಯ ವಿದೇಶಿಗರ ಕಾಯ್ದೆಯ ಅನುಸಾರ ವಿದೇಶಿ ಪ್ರಜೆಗಳಿಗೆ ಮನೆಗಳನ್ನು ಬಾಡಿಗೆಗೆ ನೀಡುವಾಗ ಮಾಲೀಕರು ಅಥವಾ ಆ ಮನೆಗಳನ್ನು ನಿರ್ವಹಿಸುತ್ತಿರುವವರು ಆ ಪ್ರಜೆಗಳ ವಿವರಗಳನ್ನು (ಪಾಸ್‌ಪೋರ್ಟ್, ವೀಸಾ ಇತರೆ) 24 ಗಂಟೆಗೊಳಗಾಗಿ Indianfrro.gov.inನಲ್ಲಿ ಸಲ್ಲಿಸಬೇಕು.
- ಬಳಿಕ ಎಫ್ಆರ್‌ಆರ್‌ಓನಿಂದ ಸಿ-ಫಾರ್ಮ್ ಪಡೆದು ಸ್ಥಳೀಯ ಠಾಣೆಗೆ ಕಡ್ಡಾಯವಾಗಿ ಸಲ್ಲಿಸಬೇಕು. ಈ ನಿಯಮ ಉಲ್ಲಂಘಿಸಿ ಮನೆಗಳನ್ನು ಬಾಡಿಗೆಗೆ ನೀಡುವುದು ಶಿಕ್ಷಾರ್ಹ ಅಪರಾಧ.
ಸಿ- ಫಾರ್ಮ್ ಸಲ್ಲಿಸುವುದರಿಂದ ಆಯಾ ವ್ಯಾಪ್ತಿಯಲ್ಲಿ ನೆಲೆಸಿರುವ ವಿದೇಶಿಗರ ವೀಸಾ ಅವಧಿ, ವಾಸ ಸ್ಥಳದ ವಿಳಾಸ, ಆದಾಯದ ಮೂಲ, ಅವರ ಚಟುವಟಿಕೆಗಳ ಮೇಲೆ ಪೊಲೀಸರು ನಿಗಾವಹಿಸಲು ಅನುಕೂಲವಾಗುತ್ತದೆ. ಅಲ್ಲದೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವವರು, ವೀಸಾ ಅವಧಿ ಅಂತ್ಯವಾದವರನ್ನು ಅವರ ದೇಶಗಳಿಗೆ ಗಡಿಪಾರು ಮಾಡಲು ಸುಲಭವಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ವೀಸಾ ಅವಧಿ ಅಂತ್ಯವಾದ ಬಳಿಕವೂ ತಮ್ಮ ದೇಶಗಳಿಗೆ ಮರಳದೇ ಬೆಂಗಳೂರಿನಲ್ಲಿ ನೆಲೆಸುತ್ತಿರುವ ವಿದೇಶಿ ಪ್ರಜೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ವಿದ್ಯಾರ್ಥಿ, ವ್ಯವಹಾರ ಮತ್ತಿತರ ಕಾರಣಗಳಿಗಾಗಿ ವೀಸಾ ಪಡೆದು ಭಾರತಕ್ಕೆ ಬರುತ್ತಿರುವ ಕೆಲವು ವಿದೇಶಿ ಪ್ರಜೆಗಳು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿರುವ ಪ್ರಕರಣಗಳು ಪತ್ತೆಯಾಗಿವೆ. ವಿಶೇಷವಾಗಿ ಡ್ರಗ್ ಪೆಡ್ಲಿಂಗ್, ವೇಶ್ಯಾವಾಟಿಕೆ, ಸೈಬರ್ ವಂಚನೆ ಪ್ರಕರಣಗಳಲ್ಲಿ ವಿದೇಶಿ ಪ್ರಜೆಗಳು ಭಾಗಿಯಾಗುತ್ತಿರುವುದು ಆತಂಕಕ್ಕೆ ಕಾರಣವಾಗುತ್ತಿದ್ದು ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಇದನ್ನೂ ಓದಿ: ಚಾ.ನಗರ | ತಾಯಿ ಹುಲಿ ಜೊತೆ ನಾಲ್ಕು ಮರಿ ಹುಲಿ ಪ್ರತ್ಯಕ್ಷ ಪ್ರಕರಣ ; ಮತ್ತೊಂದು ಮರಿ ಸೆರೆ



















