ಬೆಂಗಳೂರು: ಕೊಲೆ ಪ್ರಕರಣದ ಆರೋಪಿಯಾಗಿರುವ ನಟ ದರ್ಶನ್ ಗನ್ ಲೈಸೆನ್ಸ್ ನ್ನು ಪೊಲೀಸರು ತಾತ್ಕಾಲಿಕವಾಗಿ ಅಮಾನತಿನಲ್ಲಿಟ್ಟಿದ್ದಾರೆ. ಹೀಗಾಗಿ ಕೇಸ್ ಮುಗಿಯುವ ತನಕ ದರ್ಶನ್ ಗೆ ಲೈಸೆನ್ಸ್ ಗನ್ ಬಳಸುವ ಭಾಗ್ಯ ಇಲ್ಲದಂತಾಗಿದೆ.
ದರ್ಶನ್ ನೀಡಿದ ಕಾರಣ ಪರಿಗಣಿಸದೆ ಪೊಲೀಸರು ಗನ್ ಅನುಮತಿಯನ್ನು ಅಮಾನತ್ತಿನಲ್ಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ನಟ ದರ್ಶನ್ ಕೂಡಲೇ ಆರ್.ಆರ್.ನಗರ ಪೊಲೀಸರಿಗೆ ತಮ್ಮ ಬಳಿ ಇರುವ ಎರಡು ಗನ್ ಗಳನ್ನು ನೀಡಬೇಕಿದೆ.
ದರ್ಶನ್ ಕೊಲೆ ಪ್ರಕರಣದ ಆರೋಪಿಯಾಗಿರುವ ಹಿನ್ನೆಲೆಯಲ್ಲಿ ಗನ್ ಲೈಸೆನ್ಸ್ ರದ್ದು ಮಾಡಬೇಕೆಂದು ಪೊಲೀಸರು ಹಿಂದೆ ಪತ್ರ ಬರೆದಿದ್ದರು. ಪೊಲೀಸ್ ನೋಟಿಸ್ ಗೆ ದರ್ಶನ್ ಕೂಡ ಉತ್ತರ ನೀಡಿದ್ದರು.
ನನಗೆ ಗನ್ ಬೇಕೆ ಬೇಕು. ನಾನೊಬ್ಬ ಸೆಲೆಬ್ರಿಟಿ. ನಾನು ಹೋದ ಕಡೆ, ಬಂದ ಕಡೆ ಸಾಕಷ್ಟು ಜನ ಸೇರುತ್ತಾರೆ. ಈ ವೇಳೆ ನನ್ನ ಆತ್ಮರಕ್ಷಣೆಗೆ ಗನ್ ಬೇಕು. ಹೀಗಾಗಿ ಗನ್ ಅವಶ್ಯಕತೆ ಇದೆ ಎಂದು ನಟ ದರ್ಶನ್ ಪೊಲೀಸರ ನೋಟಿಸ್ ಗೆ ಉತ್ತರಿಸಿದ್ದರು. ಈ ಕುರಿತು ಪರಿಶೀಲನೆ ನೆಡೆಸಿರುವ ಪೊಲೀಸರು, ಮುನ್ನೆಚ್ಚರಿಕಾ ಕ್ರಮವಾಗಿ ಗನ್ ಅನುಮತಿಯನ್ನು ತಾತ್ಕಲಿಕ ಅಮಾನತಿನಲ್ಲಿಟ್ಟಿದ್ದಾರೆ.
ಆರೋಪಿ ಸ್ಥಾನದಲ್ಲಿರುವ ನಟ ದರ್ಶನ್ ಸಾಕ್ಷಿಗಳಿಗೆ ಬೆದರಿಕೆಯೊಡ್ಡುವ ಸಾಧ್ಯತೆ ಇರುತ್ತದೆ ಎಂಬ ಕಾರಣಕ್ಕೆ ಲೈಸೆನ್ಸ್ ರದ್ದು ಮಾಡಲಾಗಿದೆ.