ಭೋಪಾಲ್ : ಹೊಸದಾಗಿ ಉದ್ಯೋಗ ಪಡೆದ ಸಂಭ್ರಮದಲ್ಲಿದ್ದ 22 ವರ್ಷದ ಇಂಜಿನಿಯರ್ ಒಬ್ಬರನ್ನು ಕೇವಲ 10,000 ರೂ. ಲಂಚ ನೀಡಲು ನಿರಾಕರಿಸಿದ್ದಕ್ಕೆ ಇಬ್ಬರು ಪೊಲೀಸ್ ಕಾನ್‌ಸ್ಟೆಬಲ್‌ಗಳು ಹೊಡೆದು ಕೊಂದಿರುವ ಆಘಾತಕಾರಿ ಘಟನೆ ಭೋಪಾಲ್‌ನಲ್ಲಿ ನಡೆದಿದೆ. ಗುರುವಾರ ಇಂದ್ರಾಪುರಿ ಪ್ರದೇಶದಲ್ಲಿ ನಡೆದ ಈ ಅಮಾನವೀಯ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಆರೋಪಿಗಳು ಇನ್ನೂ ತಲೆಮರೆಸಿಕೊಂಡಿದ್ದಾರೆ.
ಇಂಜಿನಿಯರಿಂಗ್ ಪದವಿ ಮುಗಿಸಿ ಹೊಸ ಉದ್ಯೋಗ ಪಡೆದಿದ್ದ ಉದಿತ್, ಕಂಪನಿಗೆ ಸಲ್ಲಿಸಲು ತನ್ನ ಪದವಿ ಪ್ರಮಾಣಪತ್ರವನ್ನು ತರಲು ಸ್ನೇಹಿತರೊಂದಿಗೆ ಸಿಹೋರ್‌ನಲ್ಲಿರುವ ತನ್ನ ಕಾಲೇಜಿಗೆ ಹೋಗಿದ್ದರು. ಭೋಪಾಲ್‌ಗೆ ಹಿಂತಿರುಗಿದ ನಂತರ, ಅವರು ಸ್ನೇಹಿತರೊಂದಿಗೆ ಉದ್ಯೋಗ ಸಿಕ್ಕಿದ ಸಂತಸದಲ್ಲಿ ಬಿಯರ್ ಪಾರ್ಟಿ ಆಯೋಜಿಸಿದ್ದರು. ಈ ವೇಳೆ ಅಲ್ಲಿಗೆ ನುಗ್ಗಿದ ಇಬ್ಬರು ಪೊಲೀಸರು, ಉದಿತ್ ಅವರಿಂದ 10,000 ರೂ.ಗಳಿಗೆ ಬೇಡಿಕೆ ಇಟ್ಟಿದ್ದಾರೆ.
ಉದಿತ್ ಅವರ ಭಾವ ಮಧ್ಯಪ್ರದೇಶದ ಮತ್ತೊಂದು ನಗರದಲ್ಲಿ ಡಿವೈಎಸ್‌ಪಿ ಆಗಿದ್ದರು. ಹೀಗಾಗಿ, ಉದಿತ್ ಹಣ ನೀಡಲು ನಿರಾಕರಿಸಿ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಇದರಿಂದ ಕುಪಿತಗೊಂಡ ಕಾನ್‌ಸ್ಟೆಬಲ್‌ಗಳು ಉದಿತ್‌ನ ಬಟ್ಟೆ ಬಿಚ್ಚಿಸಿ, ದೊಣ್ಣೆಗಳಿಂದ ಅಮಾನವೀಯವಾಗಿ ಥಳಿಸಿದ್ದಾರೆ. ತೀವ್ರವಾಗಿ ಹಲ್ಲೆಗೊಳಗಾದ ಉದಿತ್ ಕೆಲವೇ ಕ್ಷಣಗಳಲ್ಲಿ ವಾಂತಿ ಮಾಡಲು ಪ್ರಾರಂಭಿಸಿದ್ದು, ಸ್ನೇಹಿತರು ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಲ್ಲಿಂದ ಅವರನ್ನು ಏಮ್ಸ್‌ಗೆ ಸ್ಥಳಾಂತರಿಸಲಾಯಿತಾದರೂ, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರು ಎಂದು ವೈದ್ಯರು ಘೋಷಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳು ನೀಡಿದ ವಿಡಿಯೋದಲ್ಲಿ, ಪೊಲೀಸ್ ಪೇದೆಯೊಬ್ಬರು ಬರಿಮೈಯಲ್ಲಿದ್ದ ಸಂತ್ರಸ್ತನನ್ನು ದೊಣ್ಣೆಯಿಂದ ಹೊಡೆಯುತ್ತಿರುವುದು ಮತ್ತು ಮತ್ತೊಬ್ಬ ಪೊಲೀಸ್ ಹಿಂಬದಿಯಿಂದ ಥಳಿಸುತ್ತಿರುವುದು ಸೆರೆಯಾಗಿದೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ, “ತೀವ್ರವಾದ ಹೊಡೆತದಿಂದ ಮೇದೋಜೀರಕ ಗ್ರಂಥಿಯಲ್ಲಿ ಉಂಟಾದ ರಕ್ತಸ್ರಾವವೇ (ಟ್ರಾಮ್ಯಾಟಿಕ್ ಹೆಮರಾಜಿಕ್ ಪ್ಯಾಂಕ್ರಿಯಾಟೈಟಿಸ್) ಸಾವಿಗೆ ಕಾರಣ” ಎಂದು ಉಲ್ಲೇಖಿಸಲಾಗಿದೆ.
“ನನ್ನ ಮಗನನ್ನು ಕೊಂದವರೇ ಪೊಲೀಸರಾಗಿರುವುದರಿಂದ, ಅವರಿಂದ ನ್ಯಾಯಯುತ ತನಿಖೆಯನ್ನು ನಾವು ನಿರೀಕ್ಷಿಸಲು ಸಾಧ್ಯವಿಲ್ಲ. ಈ ಪ್ರಕರಣದ ತನಿಖೆಯನ್ನು ಎಸ್‌ಐಟಿ ಅಥವಾ ಸಿಬಿಐನಂತಹ ಉನ್ನತ ಸಂಸ್ಥೆಯಿಂದ ನಡೆಸಬೇಕು. ಆರೋಪಿ ಪೊಲೀಸರಿಗೆ ಮರಣದಂಡನೆ ವಿಧಿಸಬೇಕು,” ಎಂದು ಸಹಾಯಕ ಇಂಜಿನಿಯರ್ ಆಗಿರುವ ಉದಿತ್ ಅವರ ತಂದೆ ಆಗ್ರಹಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿ, “ಇದು ಪೊಲೀಸರೇ ಮಾಡಿದ ಕೊಲೆ. 48 ಗಂಟೆ ಕಳೆದರೂ ಮುಖ್ಯಮಂತ್ರಿಯೂ ಆಗಿರುವ ಗೃಹ ಸಚಿವರು ಕುಟುಂಬವನ್ನು ಸಂಪರ್ಕಿಸಿಲ್ಲ. ಸರ್ಕಾರ ಸಂಪೂರ್ಣವಾಗಿ ಸಂವೇದನಾಹೀನವಾಗಿದೆ,” ಎಂದು ಟೀಕಿಸಿದ್ದಾರೆ. ಆರೋಪಿಗಳಾದ ಇಬ್ಬರು ಕಾನ್‌ಸ್ಟೆಬಲ್‌ಗಳನ್ನು ಅಮಾನತುಗೊಳಿಸಲಾಗಿದ್ದರೂ, ಅವರಿನ್ನೂ ತಲೆಮರೆಸಿಕೊಂಡಿದ್ದಾರೆ ಮತ್ತು ಅವರನ್ನು ಪತ್ತೆಹಚ್ಚಲು ಹಲವು ತಂಡಗಳನ್ನು ರಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.