ಗದಗ: ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಆರೋಪಿಗಳಿಗೆ ಕೋರ್ಟ್ 5 ವರ್ಷ ಕಠಿಣ ಶಿಕ್ಷೆ ವಿಧಿಸಿದೆ.
2017ರ ಫೆಬ್ರವರಿ 5ರಂದು ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ (Laxmeshwar Police Station) ಬೆಂಕಿ ಹಚ್ಚಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 23 ಜನ ಅಪರಾಧಿಗಳಿಗೆ ಗದಗ (Gadag) ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 5 ವರ್ಷ ಕಠಿಣ ಶಿಕ್ಷೆ ಹಾಗೂ 36.87 ಲಕ್ಷ ರೂ. ದಂಡ ವಿಧಿಸಿದೆ. ವ್ಯಕ್ತಿ ಸಾವಿನಿಂದಾಗಿ ಜನ ರೊಚ್ಚಿಗೆದ್ದಿದ್ದರಿಂದಾಗಿ ಈ ದುರ್ಘಟನೆ ನಡೆಯುವಂತಾಗಿತ್ತು.
ಅಕ್ರಮ ಮರಳು ಸಾಗಿಸುವ ವಾಹನವನ್ನು ಪೊಲೀಸರು ತಡೆದಿದ್ದರು. ಅಲ್ಲದೇ, ಲಕ್ಷ್ಮೇಶ್ವರ ತಾಲೂಕಿನ ಬಟ್ಟೂರು ಗ್ರಾಮದ ನಿವಾಸಿ ಶಿವಪ್ಪ ಡೋಣಿ ಎಂಬಾತನಿಗೆ ಪೊಲೀಸರು ಥಳಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಶಿವಪ್ಪನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಇದರಿಂದ ಆಕ್ರೋಶಗೊಂಡ ಸಂಬಂಧಿಕರು ಹಾಗೂ ಗ್ರಾಮಸ್ಥರು ಮೃತದೇಹವನ್ನು ಪೊಲೀಸ್ ಠಾಣೆ ಮುಂದಿಟ್ಟು ಪ್ರತಿಭಟನೆ ನಡೆಸಿದ್ದರು.
ಪ್ರತಿಭಟನೆ ಉಗ್ರರೂಪ ತಾಳಿ, ಪೊಲೀಸ್ ಠಾಣೆಯೊಳಗೆ ನುಗ್ಗಿ, ಕಚೇರಿಯಲ್ಲಿದ್ದ ಕಡತಗಳು, ದಾಖಲೆಗಳು, ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದರು. ಅಲ್ಲದೇ, ಪೊಲೀಸ್ ಜೀಪ್, ಹತ್ತಾರು ಬೈಕ್ ಗಳಿಗೆ ಬೆಂಕಿ ಹಚ್ಚಿದ್ದರು. ಪೊಲೀಸರ ಮೇಲೆ ಹಲ್ಲೆ ಕೂಡ ನಡೆದಿದ್ದವು. ಪೊಲೀಸರು ಓಡಿ ಹೋಗಿ ಜೀವ ಉಳಿಸಿಕೊಂಡಿದ್ದರು. ಈ ಕುರಿತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ 122 ಜನರ ವಿರುದ್ಧ ದೂರು ದಾಖಲಾಗಿತ್ತು. ವಿಚಾರಣೆ ನಡೆಸಿದ ಕೋರ್ಟ್ 23 ಜನರಿಗೆ 5 ವರ್ಷ ಕಠಿಣ ಶಿಕ್ಷೆ ಹಾಗೂ 36 ಲಕ್ಷ 87 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ.