ಬೆಂಗಳೂರು: ಸಿದ್ದಾಪುರ ದರೋಡೆ ಪ್ರಕರಣ ಮಾಸುವ ಮುನ್ನವೇ ಮತ್ತೊಬ್ಬ ಪೊಲೀಸ್ ಸಿಬ್ಬಂದಿಯ ಮೇಲೆ ಕಳ್ಳತನ ಆರೋಪ ಬಂದಿದೆ. ಪೊಲೀಸ್ ಆಯುಕ್ತರ ಕಚೇರಿಯ ಆವರಣದಲ್ಲಿಯೇ ಕಳ್ಳತನ ನಡೆದಿದೆ.
ಸೈಬರ್ ಪ್ರಕರಣದ ಆರೋಪಿಯನ್ನು ವಿಚಾರಣೆಗೆ ಕರೆತಂದಾಗ ಆತನ ಕಾರಿನಲ್ಲಿ 11 ಲಕ್ಷ ಹಣದ ಬ್ಯಾಗ್ ಅನ್ನು ಹೆಡ್ ಕಾನ್ಸ್‌ಟೇಬಲ್ ಜಬೀವುಲ್ಲಾ ಕದ್ದಿರುವ ಆರೋಪ ಕೇಳಿ ಬಂದಿದೆ.
ಹಣ ಕಳ್ಳತನ ಮಾಡಿ ಏನು ಗೊತ್ತೇ ಇಲ್ಲ ಎನ್ನುವಂತೆ ಜಬೀವುಲ್ಲಾ ಕೆಲಸ ಮಾಡುತ್ತಿದ್ದ. ಇತ್ತ ಆರೋಪಿ ಬಂಧಿಸಿದ್ದ ಇನ್ಸ್ಪೆಕ್ಟರ್ ಉಮೇಶ್ ಅಂಡ್ ಟೀಂ ಆತನನ್ನು ಜೈಲಿಗಟ್ಟಿತ್ತು. ಬಳಿಕ ಜಾಮೀನು ಪಡೆದು ಹೊರಬಂದ ಆರೋಪಿ ತನ್ನ ಕಾರಿನಲ್ಲಿ ಇದ್ದ ಹಣದ ಬ್ಯಾಗ್ ನಾಪತ್ತೆ ಆಗಿರುವುದನ್ನು ನೋಡಿ ಈ ಬಗ್ಗೆ ಸೈಬರ್ ಪೊಲೀಸರ ಬಳಿ ಪ್ರಶ್ನೆ ಮಾಡಿದ್ದಾನೆ. ಆರೋಪಿಯ ಪ್ರಶ್ನೆಗೆ ಗಾಬರಿಗೊಂಡು ಪರಿಶೀಲನೆ ಮಾಡಿದಾಗ ಕಾರಿನಲ್ಲಿದ್ದ ಹಣವನ್ನು ಜಬೀವುಲ್ಲಾ ತೆಗೆದುಕೊಂಡು ಹೋಗಿರುವುದು ಬೆಳಕಿಗೆ ಬಂದಿದೆ.
ಸಿಸಿಟಿವಿ ಕ್ಯಾಮೆರಾದಲ್ಲಿ ಜಬೀವುಲ್ಲಾ ಹಣದ ಬ್ಯಾಗ್ ಕಳ್ಳತನ ಮಾಡಿರುವುದು ಗೊತ್ತಾಗಿದೆ. ಇತ್ತ ಸುಮಾರು 11 ಲಕ್ಷ ಹಣ ಕಳ್ಳತನ ಮಾಡಿ ಹೆಡ್ ಕಾನ್ಸ್ಟೇಬಲ್ ಜಬಿವುಲ್ಲಾ ಆರಾಮಾಗಿ ಓಡಾಡಿಕೊಂಡಿದ್ದ. ಘಟನೆಯ ಬಗ್ಗೆ ಸಿಸಿಬಿ ಡಿಸಿಪಿ ರಾಜಾ ಇಮಾಮ್ ಖಾಸಿಂಗೆ ಹಣ ಕಳೆದುಕೊಂಡ ವ್ಯಕ್ತಿ ದೂರು ನೀಡಿದ್ದರು. ದೂರು ಪಡೆದುಕೊಂಡು ಕಾನ್ಸ್‌ಟೇಬಲ್ ಜಬೀವುಲ್ಲಾ ಮನೆ ಸರ್ಚ್ ಮಾಡಲು ತೆರಳಿದಾಗ ಮನೆಯ ಬಳಿ ಜಬೀವುಲ್ಲಾ ಹೈಡ್ರಾಮಾ ಮಾಡಿದ್ದಾನೆ. ಮನೆಯ ಒಳಗೆ ಸೈಬರ್ ಪೊಲೀಸರನ್ನು ಬಿಡದೆ ಗಲಾಟೆ ಮಾಡಿದ್ದಾನೆ. ಕೊನೆಗೆ ಜಬೀವುಲ್ಲಾನನ್ನು ತಡೆದು ಮನೆ ಸರ್ಚ್ ಮಾಡಿದಾಗ ತನ್ನ ಕೋಣೆಯ ಬೆಡ್ ಕೆಳಗೆ ಲಕ್ಷ ಲಕ್ಷ ಹಣ ಜೋಡಿಸಿಟ್ಟಿದ್ದು ಬಯಲಾಗಿದೆ. ಅಲ್ಲದೇ ಕದ್ದ ಹಣದಿಂದಲೇ ಪತ್ನಿಗೆ ಒಡೆವೆಗಳನ್ನೂ ಕೊಡಿಸಿದ್ದ ಎನ್ನುವುದು ಕಂಡುಬಂದಿದೆ.
ಸದ್ಯ ಹೆಡ್ ಕಾನ್ಸ್ಟೇಬಲ್ ಜಬಿವುಲ್ಲಾ 2 ಲಕ್ಷ ರೂ. ಹಣ ವಾಪಸ್ ಕೊಟ್ಟಿದ್ದಾನೆ. ಉಳಿದ ಹಣ ವಾಪಸ್ ಕೊಡುವಂತೆ ಹಿರಿಯ ಅಧಿಕಾರಿಗಳು ತಾಕೀತು ಮಾಡಿದ್ದಾರೆ.
ಈಗಾಗಲೇ ಸಿದ್ದಾಪುರ ದರೋಡೆ ಕೇಸ್‌ನಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಅಣ್ಣಪ್ಪ ನಾಯಕ್ ಬಂಧನವಾಗಿದ್ದಾರೆ, ಜೆ.ಪಿ ನಗರದಲ್ಲಿ ಸೀನಿಯರ್ ಸಿಟಿಜನ್ ಬಳಿ ಹಣಪಡೆದ ಹಿನ್ನೆಲೆ ಇಬ್ಬರ ಅಮಾನತು ಮಾಡಲಾಗಿತ್ತು. ಬೆಳ್ಳಂದೂರು ಪೊಲೀಸರ ಮೇಲೆ ಸಾವಿನಲ್ಲೂ ಹಣ ಪಡೆದ ಆರೋಪ ಬಂದಿತ್ತು. ಇದೀಗ ಸೈಬರ್ ಠಾಣೆಯ ಸಿಬ್ಬಂದಿ ಹೆಡ್ ಕಾನ್ಸ್ಟೇಬಲ್ ಜಬಿವುಲ್ಲಾ ಮೇಲೆ ಕಳ್ಳತನದ ಆರೋಪ ಬಂದಿದ್ದು, ದೂರು ಪಡೆದಿರುವ ಪೊಲೀಸರಿಂದ ಪ್ರಕರಣ ಮುಚ್ಚಿ ಹಾಕಲು ಯತ್ನ ನಡೆದಿದೆ ಎನ್ನುವ ಆರೋಪ ಸಹ ಕೇಳಿ ಬಂದಿದೆ.
ಇದನ್ನೂ ಓದಿ:ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಿಸಲು ಇ-ಗಸ್ತು ಅತ್ಯಂತ ಮುಖ್ಯ | ಈಶ್ವರ ಖಂಡ್ರೆ ಸೂಚನೆ


















