ಹುಬ್ಬಳ್ಳಿ: ನಗರದಲ್ಲಿನ ಬಾಲಕಿಯ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಕೌಂಟರ್ ಆಗಿದ್ದ ಹಂತಕನ ಫೋಟೋವನ್ನು ಪೊಲೀಸರು ರಿಲೀಸ್ ಮಾಡಿದ್ದಾರೆ.
ಬಾಲಕಿ ಹತ್ಯೆಗೈದು ಪೊಲೀಸರ ಎನ್ಕೌಂಟರ್ಗೆ ಹಂತಕ ಬಲಿಯಾಗಿದ್ದ. ಹುಬ್ಬಳ್ಳಿಯ ಕಿಮ್ಸ್ ಶವಗಾರದಲ್ಲಿ ಇಲ್ಲಿಯವರೆಗೂ ಅನಾಥವಾಗಿ ಹಂತಕನ ಶವ ಬಿದ್ದಿದೆ. ಈಗ ಪೊಲೀಸರು ಕಾಮುಕ ರಿತೇಶಕುಮಾರನ (35) ಭಾವಚಿತ್ರ ಬಿಡುಗಡೆ ಮಾಡಿದ್ದಾರೆ. ಅಶೋಕ ನಗರ ಪೊಲೀಸ್ ಠಾಣೆಯಿಂದ ಕುಟುಂಬಸ್ಥರ ಪತ್ತೆಗೆ ಭಾವಚಿತ್ರ ಸಹಿತ ಪ್ರಕಟಣೆ ಹೊರಡಿಸಲಾಗಿದೆ.
ಗೋದಿ ಮೈಬಣ್ಣ, ತೆಳ್ಳನೆಯ ಮೈಕಟ್ಟು, ಕೋಲು ಮುಖ, 5.3 ಎತ್ತರ, ಅಗಲ ಹಣೆ ಹೊಂದಿದ್ದಾನೆ. ಅಲ್ಲದೇ ಈತನ ಬಲಗೈಯಲ್ಲಿ ಹಿಂದಿ ಅಕ್ಷರದಲ್ಲಿ ಓಂ ನಮಃ ಶಿವಾಯ ಜಯ ಸಂಜಯ ಎಂಬ ಟ್ಯಾಟೋ ಗುರುತು ಸಹ ಇದೆ. ಈತನ ಗುರುತು ಪರಿಚಯ ಇದ್ದವರು ಕೂಡಲೇ 0836-2233490 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ಹೊರಡಿಸಲಾಗಿದೆ. ಅಲ್ಲದೇ, ಪೋಷಕರ ಪತ್ತೆಗೆ ಬಿಹಾರ ಸೇರಿದಂತೆ ವಿವಿಧ ರಾಜ್ಯಗಳಿಗೆ ಪೊಲೀಸರ ತಂಡ ತೆರಳಿದೆ.