ದಾವಣಗೆರೆ : ಬೈಕ್ ಸವಾರರಿಗೆ ಗುಲಾಬಿ ಹೂ ನೀಡಿ ಹೆಲ್ಮೆಟ್ ಕಡ್ಡಾಯವಾಗಿ ಹಾಕಿ ಎಂದು ಸಿಪಿಐ ಅಧಿಕಾರಿ ಹಾಗೂ ಸಿಬ್ಬಂದಿಗಳು ಸೇರಿ ಜಾಗೃತಿ ಮೂಡಿಸಿರುವ ಘಟನೆ ದಾವಣಗೆರೆಯ ಸಂತೆಬೆನ್ನೂರು ಗ್ರಾಮ ವೃತ್ತದಲ್ಲಿ ನಡೆದಿದೆ.
ಹೆಲ್ಮೆಟ್ ಧಾರಣೆ ಜೀವ ರಕ್ಷಣೆಗೆ ಅತ್ಯಂತ ಅಗತ್ಯ. ಅಪಘಾತಗಳ ವೇಳೆ ಗಂಭೀರ ಗಾಯಗಳನ್ನು ತಪ್ಪಿಸಬಹುದು ಎಂದು ಸಿಪಿಐ ಮಲ್ಲಮ್ಮ ಚೌಬೆ ಹೇಳಿದ್ದಾರೆ.
ಇದೇ ವೇಳೆ ಕೆಲವು ಸವಾರರಿಗೆ ಹೂವು ನೀಡುವ ಮೂಲಕ ಎಚ್ಚರಿಕೆಯನ್ನು ನೀಡಿದ ಅವರು “ಬೈಕ್ ಸ್ಕೂಟರ್ ಗಳನ್ನು ಹತ್ತುವಾಗ ಮೊದಲು ಹೆಲ್ಮೆಟ್ ಧರಿಸಿ ನಂತರ ಬೈಕನ್ನು ಚಲಾಯಿಸಬೇಕು. ಹೆಲ್ಮೆಟ್ ಇದ್ದರೂ ಕೂಡ ಅದನ್ನು ಬಿಟ್ಟು ಹಾಗೆ ಬೈಕ್ ಚಲಾಯಿಸುವುದು ಸುರಕ್ಷತೆಯ ದೃಷ್ಟಿಯಿಂದ ಒಳ್ಳೆಯದಲ್ಲ. ಮೊದಲ ಬಾರಿಗೆ ಎಚ್ಚರಿಕೆಯ ದೃಷ್ಟಿಯಿಂದ ಹೂ ಕೊಟ್ಟು ಅರಿವು ಮೂಡಿಸುತ್ತಿದ್ದೇವೆ. ಮುಂದಿನ ಬಾರಿ ಹೆಲ್ಮೆಟ್ ರಹಿತ ವಾಹನ ಸವಾರರಿಗೆ ದಂಡ ವಿಧಿಸಲಾಗುತ್ತದೆ” ಎಂದು ಎಚ್ಚರಿಸಿದರು.
ಈ ವೇಳೆ ಮಹಿಳಾ ಸವಾರರು ಸೇರಿದಂತೆ ಬೈಕ್ ಸವಾರರನ್ನು ಹೆಲ್ಮೆಟ್ ಇದೆಯಾ? ಎಂದು ಪ್ರಶ್ನಿಸಿ, ಹೆಲ್ಮೆಟ್ ಖರೀದಿ ಮಾಡಿದ್ದೀರಾ, ಹೆಲ್ಮೆಟ್ ಇದ್ದರೂ ಕೂಡ ಏಕೆ ಧರಿಸುತ್ತಿಲ್ಲ?” ಎಂದು ಪ್ರಶ್ನೆ ಹಾಕಿದರು.
ಕಾನೂನಿನ ಬಗ್ಗೆ ಅಸಡ್ಡೆ ಮಾಡಬಾರದು, ಪೊಲೀಸರು ಏನು ಮಾಡುತ್ತಾರೆ ಬಿಡು? ಎನ್ನುವ ಧೋರಣೆ ಬೇಡ. ನಿಮ್ಮ ಸುರಕ್ಷತೆಯ ದೃಷ್ಟಿಯಿಂದ ಹೆಲ್ಮೆಟ್ ಧರಿಸಿ, ನಿಮ್ಮ ಸುರಕ್ಷತೆಯ ಕ್ರಮಕ್ಕಾಗಿ ಪೊಲೀಸರು ದಂಡ ವಿಧಿಸಿ ಎಚ್ಚರಿಸುತ್ತಾರೆ. ನಿಮ್ಮ ಸುರಕ್ಷತೆ ನೀವೇ ಕಾಯ್ದುಕೊಳ್ಳಬೇಕು” ಎಂದು ತಿಳಿಸಿದರು.
ಈ ಜಾಗೃತಿ ಕಾರ್ಯಕ್ರಮದಲ್ಲಿ ಪಿಎಸ್‌ಐ ಭಾರತಿ ಸೇರಿದಂತೆ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದು, ಸಾರ್ವಜನಿಕರಿಗೆ ಸಂಚಾರ ನಿಯಮಗಳ ಮಹತ್ವವನ್ನು ವಿವರಿಸಿದರು. ಗ್ರಾಮಸ್ಥರು ಹಾಗೂ ವಾಹನ ಸವಾರರು ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.
ಇದನ್ನೂ ಓದಿ : ಇಸ್ರೋ ರಾಕೆಟ್ ವೈಫಲ್ಯ | 15 ಉಪಗ್ರಹಗಳು ಭಸ್ಮ, ಕಕ್ಷೆ ಸೇರದಿದ್ದರೂ ಬದುಕುಳಿದ ‘ಒಂದು’ ಪುಟಾಣಿ.. ಏನಿದರ ವಿಶೇಷ?



















