ಪ್ರಯಾಗ್‌ರಾಜ್: ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ದೇಶದ ಮೂಲೆ ಮೂಲೆಗಳಿಂದ ಬರುವ ಭಕ್ತರಿಗೆ ಆಹಾರ ಒದಗಿಸಲೆಂದೇ ಹಲವು ಸಂಘ ಸಂಸ್ಥೆಗಳು “ಭಂಡಾರ”ಗಳನ್ನು ಅಂದರೆ ಸಮುದಾಯ ಅಡುಗೆ ಮನೆಗಳನ್ನು ನಿರ್ಮಿಸಿವೆ. ಇಂತಹ ಒಂದು ಭಂಡಾರದಲ್ಲಿ ತಯಾರಿಸಲಾಗುತ್ತಿರುವ ಆಹಾರಕ್ಕೆ ಪೊಲೀಸ್ ಅಧಿಕಾರಿಯೊಬ್ಬರು ಬೂದಿ(ಭಸ್ಮ)ಯನ್ನು ಸೇರಿಸುತ್ತಿರುವ ವಿಡಿಯೋ ಬಹಿರಂಗವಾಗಿದ್ದು, ಆ ಅಧಿಕಾರಿಯನ್ನು ಈಗ ಸಸ್ಪೆಂಡ್ ಮಾಡಲಾಗಿದೆ.
ಆಹಾರಕ್ಕೆ ಬೂದಿಯನ್ನು ಬೆರೆಸುತ್ತಿದ್ದ ಆರೋಪದಲ್ಲಿ ಸರೋವನ್‌ನ ಸ್ಟೇಷನ್ ಹೌಸ್ ಆಫೀಸರ್(ಎಸ್‌ಎಚ್‌ಒ) ಬ್ರಿಜೇಶ್ ಕುಮಾರ್ ತಿವಾರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಸದ್ಯಕ್ಕೆ ಅವರನ್ನು ಅಮಾನತು ಮಾಡಲಾಗಿದೆ ಎಂದು ಗಂಗಾನಗರ ಡಿಸಿಪಿ ಕುಲದೀಪ್ ಸಿಂಗ್ ಗುಣಾವತ್ ಹೇಳಿದ್ದಾರೆ.
ಸ್ಟವ್‌ನಲ್ಲಿ ತಯಾರಾಗುತ್ತಿದ್ದ ಅಡುಗೆಯ ದೊಡ್ಡ ಪಾತ್ರೆಯೊಳಕ್ಕೆ ತಿವಾರಿ ಅವರು ಬೂದಿಯನ್ನು ಬಿಸಾಕುತ್ತಿರುವ ವಿಡಿಯೋವನ್ನು ಯಾರೋ ಸೆರೆಹಿಡಿದಿದ್ದರು. ಇದು ನಂತರ ಕ್ಷಣಮಾತ್ರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಟ್ವೀಟರ್ ನಲ್ಲೂ ವಿಡಿಯೋ ಶೇರ್ ಮಾಡಿದ್ದ ವ್ಯಕ್ತಿಯೊಬ್ಬರು ಅದನ್ನು ಗಂಗಾನಗರ ಡಿಸಿಪಿಗೂ ಟ್ಯಾಗ್ ಮಾಡಿ, ಇಂಥ ನಾಚಿಕೆಗೇಡಿನ ಕೆಲಸ ಮಾಡಿದ ಪೊಲೀಸ್ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದ್ದರು. ಕೂಡಲೇ ಪೊಲೀಸರು ಎಚ್ಚೆತ್ತು ಅಧಿಕಾರಿಯನ್ನು ಸಸ್ಪೆಂಡ್ ಮಾಡಿದ್ದಾರೆ.
ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರೂ ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು. “ಮಹಾಕುಂಭಕ್ಕೆ ಆಗಮಿಸಿರುವ ಭಕ್ತಾದಿಗಳಿಗೆ ಆಹಾರ ಮತ್ತು ನೀರು ಪೂರೈಸುವಂಥ ಉತ್ತಮ ಕೆಲಸಗಳನ್ನು ಕೆಲವು ಸಂಘ ಸಂಸ್ಥೆಗಳು ಮಾಡುತ್ತಿವೆ. ರಾಜಕೀಯ ದ್ವೇಷದಿಂದ ಅದನ್ನು ಹಾಳುಮಾಡಲು ಕೆಲವರು ಯತ್ನಿಸುತ್ತಿರುವುದು ದುರದೃಷ್ಟಕರ. ಸಾರ್ವಜನಿಕರು ಈ ಬಗ್ಗೆ ಕೂಡಲೇ ಗಮನ ಹರಿಸಿ!” ಎಂದು ಅಖಿಲೇಶ್ ಟ್ವೀಟ್ ಮಾಡಿದ್ದರು.