ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ದರ್ಶನ್ ರನ್ನು ಜೈಲಿನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದ ಹಾಸ್ಯ ನಟ ಹಾಗೂ ಈ ಪ್ರಕರಣದ ಸಾಕ್ಷಿದಾರ ಚಿಕ್ಕಣ್ಣಗೆ ಪೊಲೀಸರು ವಾರ್ನಿಂಗ್ ನೀಡಿದ್ದಾರೆ ಎನ್ನಲಾಗಿದೆ.
ರೇಣುಕಾಸ್ವಾಮಿ ಕೊಲೆಗೂ ಮುನ್ನ ಜೂನ್ 8ರಂದು ದರ್ಶನ್ ಮತ್ತು ಪ್ರಕರಣದ ಇತರ ಆರೋಪಿಗಳು ಸ್ಟೋನಿ ಬ್ರೂಕ್ ಪಬ್‌ನಲ್ಲಿ ಪಾರ್ಟಿ ಮಾಡಿದ್ದರು. ಚಿಕ್ಕಣ್ಣ ಕೂಡ ಆ ಪಾರ್ಟಿಯಲ್ಲಿ ಭಾಗಿಯಾಗಿದ್ದ. ಹೀಗಾಗಿ ಪೊಲೀಸರು ಅವರನ್ನು ಪ್ರಮುಖ ಸಾಕ್ಷಿದಾರರಾಗಿ ಪರಿಗಣಿಸಿ ಈ ಹಿಂದೆಯೇ ವಿಚಾರಣೆ ನಡೆಸಿದ್ದರು. ನ್ಯಾಯಾಧೀಶರ ಎದುರು ಸಿಆರ್‌ಪಿಸಿ 164ರ ಅಡಿ ಹೇಳಿಕೆ ದಾಖಲಿಸಿದ್ದರು.
ಆನಂತರ ಚಿಕ್ಕಣ್ಣ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಹೋಗಿ ದರ್ಶನ್ ಅವರನ್ನು ಭೇಟಿ ಆಗಿದ್ದರು. ಚಿಕ್ಕಣ್ಣ ಅವರ ಈ ನಡೆ ಅನುಮಾನಕ್ಕೆ ಕಾರಣವಾಗಿತ್ತು. ಹೀಗಾಗಿ, ಪೊಲೀಸರು ಚಿಕ್ಕಣ್ಣಗೆ ನೋಟಿಸ್ ನೀಡಿದ್ದರು.
ಇಂದು ವಿಚಾರಣೆ ನಡೆಸಿದ ಪೊಲೀಸರು, ಯಾವ ಕಾರಣಕ್ಕೆ ಜೈಲಿನಲ್ಲಿ ದರ್ಶನ್ ಅವರನ್ನು ಭೇಟಿ ಮಾಡಿದಿರಿ? ಅವರ ಭೇಟಿಗೆ ಒತ್ತಡ ಬಂದಿತ್ತೇ? ಭೇಟಿ ವೇಳೆ ಏನೆಲ್ಲಾ ಚರ್ಚೆಯಾಯಿತು, ಆರೋಪಿ ದರ್ಶನ್ ತಮಗೆ ಬೆದರಿಕೆ ಹಾಕಿದರೆ ಅಥವಾ ಏನಾದರೂ ಆಮಿಷ ಒಡ್ಡಿದರೆ? ಎಂಬ ಪ್ರಶ್ನೆ ಸೇರಿದಂತೆ ಹಲವಾರು ಪ್ರಶ್ನೆಗಳನ್ನು ಕೇಳಿದ್ದಾರೆ ಎನ್ನಲಾಗಿದೆ. ಈ ವೇಳೆ ಪೊಲೀಸರು ವಾರ್ನಿಂಗ್ ನೀಡಿದ್ದಾರೆ ಎನ್ನಲಾಗಿದೆ.