ಬೆಂಗಳೂರು : ಬೆಂಗಳೂರಿನಲ್ಲಿ ಆಟೋ ಗ್ಯಾಸ್ ಬಿಕ್ಕಟ್ಟು ದಿನೇ ದಿನೇ ಹೆಚ್ಚಾಗುತ್ತಿದೆ. ಹಲವು ಗ್ಯಾಸ್ ಬಂಕ್‌ಗಳಲ್ಲಿ ಬೆಲೆಗಳು ಮನಬಂದಂತೆ ಏರಿಕೆಯಾಗುತ್ತಿವೆ. ಒಂದು ಬಂಕ್‌ನಲ್ಲಿ 90 ರೂಪಾಯಿ, ಮತ್ತೊಂದರಲ್ಲಿ 95, 105, 110 ರೂಪಾಯಿ, ಕೆಲವು ಕಡೆ 115 ರೂಪಾಯಿ ವಸೂಲಿ ಮಾಡಲಾಗುತ್ತಿದೆ. ಆಟೋ ಚಾಲಕರು ಈ ಬೆಲೆ ಏರಿಕೆಯಿಂದ ತುಂಬಾ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಇದರಿಂದ ರೊಚ್ಚಿಗೆದ್ದ ಆಟೋ ಚಾಲಕರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಈ ಮಧ್ಯೆ ಆಟೋಗಳು ರಸ್ತೆಯಲ್ಲಿ ನಿಲ್ಲುವುದರಿಂದ ಸಂಚಾರ ದಟ್ಟಣೆ ಕೂಡ ಹೆಚ್ಚಾಗುತ್ತಿದೆ. ಇದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಆಟೋ ಎಲ್‌ಪಿಜಿ ಗ್ಯಾಸ್ ಬಂಕ್‌ಗೆ ಪೊಲೀಸರು ಇದೀಗ ನೋಟಿಸ್ ನೀಡಿದ್ದಾರೆ. ನಗರದ ಶೇಷಾದ್ರಿಪುರಂ ಫ್ಲಾಟ್ ಫಾರಂ ರಸ್ತೆಯಲ್ಲಿರುವ ಕೃಷ್ಣ ಆಟೋ ಗ್ಯಾಸ್ ಸ್ಟೇಷನ್‌ನಲ್ಲಿ ಆಟೋಗಳ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳುವಂತೆ ಶೇಷಾದ್ರಿಪುರಂ ಸಂಚಾರ ಪೊಲೀಸರು ನೋಟಿಸ್ ನೀಡಿದ್ದಾರೆ.

ಗ್ಯಾಸ್ ಬಂಕ್‌ಗೆ ಬರುವ ಆಟೋಗಳನ್ನು ಚಾಲಕರು ರಸ್ತೆಯಲ್ಲಿ ನಿಲ್ಲಿಸುತ್ತಿದ್ದಾರೆ. ಇದರಿಂದ ಸ್ಥಳೀಯ ನಿವಾಸಿಗಳು, ಪಾದಚಾರಿಗಳಿಗೆ ಅಡಚಣೆಯಾಗುತ್ತಿದೆ. ಹೀಗಾಗಿ ತಮ್ಮ ಸ್ಟೇಷನ್‌ನಲ್ಲಿ ಆಟೋಗಳ ನಿಲುಗಡೆಗೆ ವ್ಯವಸ್ಥೆ ಮಾಡಿಕೊಟ್ಟು, ರಸ್ತೆಯಲ್ಲಿ ಸರದಿಯಲ್ಲಿ ನಿಲ್ಲದಂತೆ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದ್ದಾರೆ.
ಸಂಚಾರ ದಟ್ಟಣೆ ಹಿನ್ನೆಲೆ ಬೆಳಗ್ಗೆ 8 ರಿಂದ 11 ಗಂಟೆವರೆಗೆ ಹಾಗೂ ಸಂಜೆ 5 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಗ್ಯಾಸ್ ಬಂಕ್ ಮುಚ್ಚಲು ಸೂಚನೆ ನೀಡಿದ್ದು, ಒಂದು ವೇಳೆ ಈ ಅವಧಿಯಲ್ಲಿ ಬಂಕ್ ತೆರೆದರೆ ಬಿಎನ್ಎಸ್ 285 ಅಡಿಯಲ್ಲಿ ಕೇಸ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ : ಸರ್ಕಾರ 6ನೇ ಗ್ಯಾರಂಟಿಯಾಗಿ ಆಟೋ ಚಾಲಕರಿಗೆ 15 ಸಾವಿರ ನೀಡಲಿ – ಹೆಚ್‌ಡಿಕೆ


















