ರಾಮ್ ಗೋಪಾಲ್ ವರ್ಮಾ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದು, ಇನ್ನೊಂದೆಡೆ ವಿಡಿಯೋ ಮಾಡಿ ನಿರ್ದೇಶಕ ಹರಿ ಬಿಟ್ಟಿದ್ದಾರೆ.
ಸಿಎಂ ಚಂದ್ರಬಾಬು ನಾಯ್ಡು, ಪವನ್ ಕಲ್ಯಾಣ್ ಸೇರಿದಂತೆ ಕೆಲವರ ಬಗ್ಗೆ ಕಳೆದ ಕೆಲ ವರ್ಷಗಳಿಂದಲೂ ಪದೇ ಪದೇ ಟ್ವೀಟ್ ಮಾಡುತ್ತಲೇ ಬಂದಿದ್ದ ರಾಮ್ ಗೋಪಾಲ್ ವರ್ಮಾ ವಿರುದ್ಧ ಪ್ರಕರಣ ದಾಖಲಾಗಿತ್ತು. ಹೀಗಾಗಿ ಪೊಲೀಸರು ರಾಮ್ ಗೋಪಾಲ್ ವರ್ಮಾಗಾಗಿ ಹುಡುಕಾಟ ನಡೆಸಿದ್ದಾರೆ.
ಈ ವೇಳೆಯಲ್ಲಿಯೇ ವರ್ಮಾ ವಿಡಿಯೋ ಒಂದನ್ನು ಹರಿಬಿಟ್ಟಿದ್ದು, ತಮ್ಮದೇ ಶೈಲಿನಲ್ಲಿ ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡಿರುವ ಜೊತೆಗೆ ಪೊಲೀಸರ ತನಿಖಾ ವಿಧಾನದ ಬಗ್ಗೆಯೂ ವ್ಯಂಗ್ಯವಾಡಿದ್ದಾರೆ. ವಿಡಿಯೋದಲ್ಲಿ ನಾನು ಒಂದು ವರ್ಷದ ಹಿಂದೆ ಮಾಡಿರುವ ಟ್ವೀಟ್, ನಾಲ್ಕು ಬೇರೆ ಬೇರೆ ಪ್ರದೇಶದಲ್ಲಿ ವಾಸಿಸುವ ಜನರಿಗೆ, ಈಗ ಒಂದೇ ಸಮಯದಲ್ಲಿ ಭಾವನೆಗಳಿಗೆ ಧಕ್ಕೆ ಮಾಡಿದೆ. ನಾಲ್ಕು ಬೇರೆ ಬೇರೆ ಪ್ರದೇಶಗಳಲ್ಲಿ ಅವರು ದೂರು ನೀಡಿದ್ದಾರೆ. ಇದು ಹೇಗೆ? ಎಂದು ಪ್ರಶ್ನಿಸಿದ್ದಾರೆ.
ನಾನು ಯಾರ ಬಗ್ಗೆ ಟ್ವೀಟ್ ಮಾಡಿದ್ದೇನೋ ಅವರಿಗೆ ಆ ಟ್ವೀಟ್ನಿಂದ ಘಾಸಿಯಾಗಿಲ್ಲ ಆದರೆ ಯಾರೋ ಮೂರನೇ ವ್ಯಕ್ತಿಯ ಭಾವನೆಗೆ ಧಕ್ಕೆ ಆಗಿದೆ. ಅಸಲಿಗೆ ನಾನು ಟ್ವೀಟ್ ಮಾಡಿದ ವ್ಯಕ್ತಿಗೂ, ನನ್ನ ಮೇಲೆ ದೂರು ನೀಡಿರುವ ವ್ಯಕ್ತಿಗೂ ಸಂಬಂಧವೇ ಇಲ್ಲ. ರಾಜಕಾರಣಿಗಳು ತಮ್ಮ ವಿರೋಧಿಗಳನ್ನು, ಟೀಕಾಕಾರರನ್ನು ಹತ್ತಿಕ್ಕಲು ಪೊಲೀಸರನ್ನು ಆಯುಧಗಳಂತೆ ಬಳಸುತ್ತಿರುವುದು ಅಮೆರಿಕ, ಯೂರೋಪ್ ದೇಶಗಳು ಹಾಗೂ ಇಲ್ಲಿಯೂ ಸಹ ನೋಡಲು ಸಿಗುತ್ತವೆ. ನಾನು ಪ್ರತ್ಯೇಕವಾಗಿ ಇಂಥಹ ರಾಜಕಾರಣಿ, ಪೊಲೀಸ್ ಅಧಿಕಾರಿ ಎಂದು ಹೇಳುತ್ತಿಲ್ಲ. ಆದರೆ ಅದು ವ್ಯವಸ್ಥೆಯಲ್ಲಿ ನಡೆಯುತ್ತಿದೆ. ಆದರೂ ನೆಲದ ಕಾನೂನಿಗೆ ಗೌರವ ಕೊಡುವ ವ್ಯಕ್ತಿ ನಾನು, ಎಲ್ಲರೂ ಕೊಡಲೇ ಬೇಕು’ ಎಂದು ಹೇಳಿದ್ದಾರೆ.