ಧಾರವಾಡ : ಕಳ್ಳರ ಮೇಲೆ ಪೊಲೀಸ್ ಗುಂಡಿನ ದಾಳಿ ಪ್ರಕರಣ ಸಂಬಂಧಿಸಿದಂತೆ ಧಾರವಾಡ ಜಿಲ್ಲಾಸ್ಪತ್ರೆಗೆ ಹುಬ್ಬಳ್ಳಿ -ಧಾರವಾಡ ಪೊಲೀಸ್ ಆಯುಕ್ತ ಶಶಿಕುಮಾರ್ ಭೇಟಿ ನೀಡಿ, ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯ ಆರೋಗ್ಯ ವಿಚಾರಿಸಿದ್ದಾರೆ.
ಇದೇ ವೇಳೆ ಗುಂಡೇಟಿಗೊಳಗಾದ ಆರೋಪಿಗಳ ಆರೋಗ್ಯವನ್ನು ವಿಚಾರಿಸಿದರು. ಸದ್ಯ ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಗುಂಡು ಹಾರಿಸಿದ್ದ ಪಿಎಸ್‌ಐ ಮಲ್ಲಿಕಾರ್ಜುನ ಮತ್ತು ಕಾನ್ಸ್ಟೇಬಲ್ ಇಸಾಕ್ ಗೆ ಮತ್ತು ಗಾಯಗೊಂಡ ಇಬ್ಬರು ಆರೋಪಿಗಳಿಗು ಚಿಕಿತ್ಸೆ ಮುಂದುವರೆದಿದೆ.
ಇದೇ ವೇಳೆ ಮಾದ್ಯಮದವರಿಗೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತ ಶಶಿಕುಮಾರ್, ಧಾರವಾಡ ಕಲಘಟಗಿ ರಸ್ತೆಯ ಪೊಲೀಸ್ ಟ್ರೆನಿಂಗ್ ಸ್ಕೂಲ್ ಬಳಿ ಓರ್ವನ ಮೇಲೆ ಮೂವರು ದಾಳಿ ಮಾಡಿ, ಬೈಕ್ ಕಸಿದುಕೊಳ್ಳಲು ಯತ್ನಿಸಿ, ಅಲ್ಲಿಂದ ಪರಾರಿಯಾಗಿದ್ದರು.
ಈ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕ ತಕ್ಷಣ ಧಾರವಾಡ ನಗರದ ಮೂರು ಠಾಣೆಯವರು ಚೆಕ್ ಪೋಸ್ಟ್ ಹಾಕಿದ್ದರು. ಬೆಳಗಿನ ಜಾವ ಹುಸೇನ್ ಸಾಬ ಎಂಬುವನನ್ನು ಬಂಧನ ಮಾಡಿದ್ದರು. ಈತ 35 ಕ್ಕೂ ಹೆಚ್ಚು ಕಳ್ಳತನ ಪ್ರಕರಣದಲ್ಲಿ ಬೇಕಾಗಿದ್ದವನು. ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದಲ್ಲಿ ಈತ ಕಳ್ಳತನ ಮಾಡುತ್ತಿದ್ದ. ಆತನನ್ನ ಹಿಡಿದುಕೊಂಡು ಜೊತೆಗಿದ್ದ ಮತ್ತೊಬ್ಬ ಕಳ್ಳ ಇರುವ ಜಾಗಕ್ಕೆ ಹೋದಾಗ ಅಲ್ಲಿ ಇಬ್ಬರು ಇದ್ದರು. ಅಲ್ಲಿ ಅವರನ್ನು ಬಂಧಿಸುವಾಗ ಹುಸೇನಸಾಬ ಪೊಲೀಸರನ್ನು ತಳ್ಳಿ ಓಡಿಹೋಗಿದ್ದಾನೆ.
ಈ ವೇಳೆ ವಿಜಯ ಅಣ್ಣಿಗೇರಿ ಮತ್ತು ಮುಜಮ್ಮಿಲ್ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಜಯ ಅಣ್ಣಿಗೇರಿ ಮೇಲೆ ಕೂಡಾ 35ಕ್ಕೂ ಹೆಚ್ಚು ಪ್ರಕರಣ ಇವೆ, ಕೆಲವು ಡಿಟೆಕ್ಟ್ ಆಗಿವೆ. ಇನ್ನೂ ಕೆಲವು ಆಗಬೇಕಿದೆ. ವಾಂಟೆಡ್ ಇದ್ದವರು ಇವರು, ಇಬ್ಬರು ರಾಜೀವಗಾಂಧಿ ನಗರದವರು, ಇವರ ಒಂದು ಕಳ್ಳರ ಟಿಮ್ ಇದೆ. ಮೊಬೈಲ್ ಬಳಸಿದರೆ ಪೊಲೀಸರು ಹಿಡಿಯಬಹುದು ಎಂದು ಇನ್ಸ್ಟಾ ಮುಖಾಂತರ ಇವರು ಒಬ್ಬರಿಗೆ ಒಬ್ಬರು ಕಮ್ಯುನಿಕೆಟ್ ಮಾಡುತಿದ್ದರು. ಸದ್ಯ ತಪ್ಪಿಸಿಕೊಂಡು ಹುಸೇನಸಾಬಗೆ ಹುಡುಕಾಟ ನಡೆಸಿದ್ದೇವೆ. ಮುಜಮ್ಮಿಲ್ ಮತ್ತು ವಿಜಯ ಹಿಡಿಯುವಾಗ ಪೊಲೀಸರು ಮೇಲೆ ದಾಳಿ ಮಾಡಿದ್ದಾರೆ. ಪಿಎಸ್ಐ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ನಂತರ ಇಬ್ಬರ ಕಾಲಿಗೆ ಎರಡು ಗುಂಡು ಹಾರಿಸಿದ್ದಾರೆ ಎಂದು ಕಮೀಷನರ್ ತಿಳಿಸಿದ್ದಾರೆ.