ಬೆಂಗಳೂರು: ಹೋಳಿ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಇಲಾಖೆ ವ್ಯಾಪಕ ಸಿದ್ಧತೆ ನಡೆಸಿದ್ದು, 15 ಅಂಶಗಳ ವಿಶೇಷ ಆದೇಶವನ್ನು ಬಿಡುಗಡೆ ಮಾಡಿದೆ. ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆ ಹಾಗೂ ಸೌಹಾರ್ದತೆ ಕಾಪಾಡುವ ಉದ್ದೇಶದಿಂದ ಜಿಲ್ಲೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಕೋಮು ಸೂಕ್ಷ್ಮ ಹಾಗೂ ಮಿಶ್ರ ಕೋಮು ಪ್ರದೇಶಗಳನ್ನು ಗುರುತಿಸಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲು ಆದೇಶಿಸಲಾಗಿದೆ. ಅಂತಹ ಪ್ರದೇಶಗಳಲ್ಲಿ ವಿಶೇಷ ಗಸ್ತು ತಂಡಗಳನ್ನು ರಚಿಸಿ ನಿಗಾವಹಿಸಲು ಸೂಚಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ವಿಡಿಯೋಗ್ರಫಿ ವ್ಯವಸ್ಥೆ ಮಾಡಬೇಕು ಎಂಬುದೂ ಮಾರ್ಗಸೂಚಿಯಲ್ಲಿ ಉಲ್ಲೇಖವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್‌ಗಳು ಹರಿದಾಡದಂತೆ ಕಣ್ಣಿಡಲು ಪ್ರತ್ಯೇಕ ಸೈಬರ್ ಘಟಕವನ್ನು ಸಕ್ರಿಯಗೊಳಿಸಲಾಗುತ್ತದೆ. ವದಂತಿ ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಶಾಂತಿ ಸಮಿತಿ ಸಭೆಗಳನ್ನು ನಡೆಸಿ ಸ್ಥಳೀಯ ಮುಖಂಡರೊಂದಿಗೆ ಸಮಾಲೋಚನೆ ನಡೆಸಿ ಸೌಹಾರ್ದತೆ ಕಾಪಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಧ್ವನಿವರ್ಧಕ ಬಳಕೆಯಲ್ಲಿ ಸುಪ್ರೀಂ ನೀಡಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಲಾಗಿದೆ.
ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಹೆಚ್ಚಿನ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ವಿಶೇಷ ಪೆಟ್ರೋಲಿಂಗ್, ಈವ್‌ಟೀಸಿಂಗ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಮಾದಕ ವಸ್ತುಗಳು ಹಾಗೂ ಅಕ್ರಮ ಮದ್ಯ ಮಾರಾಟ ತಡೆಯಲು ವಿಶೇಷ ದಾಳಿಗಳನ್ನು ನಡೆಸಲು ನಿರ್ದೇಶನ ನೀಡಲಾಗಿದೆ. ಒಟ್ಟಾರೆ ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟುನಿಟ್ಟಿನ ನಿಗಾ ವಹಿಸಲು ಪೊಲೀಸ್ ಇಲಾಖೆ ಸಜ್ಜಾಗಿದೆ.
ಇದನ್ನೂ ಓದಿ : ಸಿಎಂ-ಡಿಸಿಎಂ ಪವರ್ ಪಾಲಿಟಿಕ್ಸ್‌ನಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ | ಆರ್.ಅಶೋಕ್



















