ಬೆಂಗಳೂರು: ಹೆಂಡತಿ ಮೇಲೆ ಪೊಲೀಸಪ್ಪ ಕ್ರೌರ್ಯ ಮೆರೆದಿರುವ ಘಟನೆ ನಡೆದಿದೆ.
ಧರ್ಮಸ್ಥಳ ಸಬ್ ಇನ್ಸ್ ಪೆಕ್ಟರ್ ಕಿಶೋರ್ ವಿರುದ್ಧ ಹಲ್ಲೆಯ ಆರೋಪ ಕೇಳಿ ಬಂದಿದ್ದು, ಈ ಕುರಿತು ಚಂದ್ರಲೇಔಟ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಈ ಕುರಿತು ಪತ್ನಿ ವರ್ಷ ನೀಡಿದ ದೂರಿನ ಹಿನ್ನೆಲೆಯಲ್ಲಿ ಎಫ್ ಐಆರ್ ದಾಖಲಾಗಿದೆ.
2024ರಲ್ಲಿ ಮೂಡಿಗೆರೆ ಸಬ್ ಇನ್ಸ್ ಪೆಕ್ಟರ್ ಕಿಶೋರ್ ಹಾಗೂ ವರ್ಷ ಮದುವೆಯಾಗಿದ್ದರು. ವರದಕ್ಷಿಣೆಗಾಗಿ 10 ಲಕ್ಷ ರೂ. ನಗದು, 22 ಲಕ್ಷದ ಕ್ರೇಟಾ ಕಾರು,135 ಗ್ರಾಂ ಚಿನ್ನವನ್ನು ವರ್ಷಾ ಪೋಷಕರು ನೀಡಿದ್ದರು. ಅಲ್ಲದೇ, ವರ್ಷಾ ಅವರಿಗೆ 900 ಗ್ರಾಂ ಚಿನ್ನದೊಂದಿಗೆ 1 ಕೋಟಿ ರೂ. ಖರ್ಚು ಮಾಡಿ ಮದುವೆ ಮಾಡಿದ್ದರು.
ಇಷ್ಟಿದ್ದರೂ ಮೂಡಿಗೆರೆಯಿಂದ ಟ್ರಾನ್ಸ್ ಫರ್ ಮಾಡಿಸಿಕೊಳ್ಳುವುದಕ್ಕಾಗಿ ಕಿಶೋರ್ 10 ಲಕ್ಷ ರೂ. ಲಂಚ ಕೇಳಿದ್ದಾರೆ ಎನ್ನಲಾಗಿದೆ. ಹಣ ತರದಿದ್ದಕ್ಕೆ ವರ್ಷಾ ವಿರುದ್ಧ ಅವಾಚ್ಯವಾಗಿ ನಿಂದಿಸಿ, ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಗಂಡ, ಅತ್ತೆ ಮಾವ ಹಾಗೂ ಮೈದುನ ಸೇರಿಕೊಂಡು ಹಲ್ಲೆ ನಡೆಸಿದ್ದಾರೆ. ಮನಸೋ ಇಚ್ಛೆ ಹಲ್ಲೆ ನಡೆಸಿ ಧರ್ಮಸ್ಥಳದ ಆಸ್ಪತ್ರೆಗೆ ಕಿಶೋರ್ ದಾಖಲಿಸಿದ್ದಾರೆ ಎನ್ನಲಾಗಿದೆ. ಆನಂತರ ವರ್ಷಾ ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ದೂರು ನೀಡಿದ್ದಾರೆ. ಈಗ ಕಿಶೋರ್ ವಿರುದ್ಧ ಡೌರಿ ಕೇಸ್ ಹಾಗೂ ಬಿಎನ್ ಎಸ್ ಎಸ್ ಅಡಿ ಪ್ರಕರಣ ದಾಖಲಾಗಿದೆ.