ಕೋಲಾರ: ವ್ಯಕ್ತಿಯೊಬ್ಬ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಕೆರೆಗೆ ಹಾರಿ ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ.
ಜಿಲ್ಲೆಯ ಶ್ರೀನಿವಾಸಪುರ(Srinivaspur) ತಾಲೂಕಿನ ಗುಡಸವಾರಪಲ್ಲಿ ಗ್ರಾಮದ ಹತ್ತಿರ ಈ ಘಟನೆ ನಡೆದಿದೆ. ಗ್ರಾಮದ ಹತ್ತಿರ ಇಸ್ಪೀಟ್(Gambling) ಆಡುತ್ತಿದ್ದ ವ್ಯಕ್ತಿಯೊಬ್ಬ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಕೆರೆಗೆ ಹಾರಿದ್ದಾನೆ. ನರಸಿಂಹ (45) ಸಾವನ್ನಪ್ಪಿದ ವ್ಯಕ್ತಿ.
ಕೆರೆಯ ದಂಡೆಯ ಬಳಿಯ ಹತ್ತರಿಂದ ಹನ್ನೆರಡು ಜನರು ಇಸ್ಪೀಟ್ ಆಡುತ್ತಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಬರುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಈ ವೇಳೆ ಅಲ್ಲಿದ್ದವರು ಓಡಿ ಹೋಗಿದ್ದಾರೆ. ಆದರೆ, ನರಸಿಂಹ, ಸೀಗಲಬೈಲು ಶಂಕರ, ಎನ್ರಕಾಯಲು ಶಿವ ಎಂಬ ಮೂವರು ಮಾತ್ರ ಪೊಲೀಸರಿಂದ ತಪ್ಪಿಸಿಕೊಳ್ಳಲು ಕೆರೆಗೆ ಹಾರಿದ್ದಾರೆ . ಈ ಪೈಕಿ ಶಂಕರ ಮತ್ತು ಶಿವ ಕೆರೆಯಲ್ಲಿ ಈಜಿ ಮತ್ತೊಂದು ದಡ ಸೇರಿದ್ದಾರೆ.
ಆಗ ಪೊಲೀಸರು ಯಾರೂ ಸಿಕ್ಕಿಲ್ಲ ಎಂದು ಮರಳಿ ಹೋಗಿದ್ದಾರೆ. ಆದರೆ, ಸಂಜೆ ವೇಳೆಗೆ ನರಸಿಂಹ ನಾಪತ್ತೆಯಾಗಿದ್ದ. ಹೀಗಾಗಿ ಕುಟುಂಬಸ್ಥರು ರಾಯಲ್ಪಾಡು ಪೊಲೀಸರಿಗೆ ದೂರು ನೀಡಿದ್ದಾರೆ. ಆನಂತರ ವಿಷಯ ಬೆಳಕಿಗೆ ಬಂದಿದೆ. ಈ ಕುರಿತು ಶ್ರೀನಿವಾಸಪುರ ತಾಲ್ಲೂಕು ರಾಯಲ್ಪಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.