ಬೆಂಗಳೂರು: ವಿದ್ಯಾರ್ಥಿಗಳಿಗೆ ಆಸೆ ತೋರಿಸಿ, ಅವರ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆದು ಸೈಬರ್ ಕ್ರೈಂಗೆ ಬಳಸುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ರಾಜಸ್ಥಾನ ಮೂಲದ ಅಭಯ್ದಾನ್ ಚರಣ್ (19), ಅರವಿಂದ್ ಕುಮಾರ್ (19), ಪವನ್ ಬಿಷ್ಣೋಯಿ (18) ಮತ್ತು ಸವಾಯಿ ಸಿಂಗ್ (21) ಬಂಧಿತ ಆರೋಪಿಗಳು.
ಸೆ.6ರಂದು ವ್ಯಕ್ತಿಯೊಬ್ಬರಿಗೆ ಅರೆಕಾಲಿಕ ನೌಕರಿ ಅಮಿಷವೊಡ್ಡಿ 12.43 ಲಕ್ಷ ರೂ. ಅನ್ನು ವಿವಿಧ ಬ್ಯಾಂಕ್ ಖಾತೆಗೆ ಜಮೆ ಮಾಡಿಸಿಕೊಂಡು ವಂಚನೆ ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡ ಎಸಿಪಿ ಡಾ. ಗೋವರ್ಧನ್ ಗೋಪಾಲ್ ಮತ್ತು ಇನ್‌ಸ್ಪೆಕ್ಟರ್ ಪಿ.ಎನ್. ಈಶ್ವರಿ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ.
ರಾಜಸ್ಥಾನದಿಂದ ನಗರಕ್ಕೆ ಬರುತ್ತಿದ್ದ ಆರೋಪಿಗಳು ಪರಿಚಿತ ರಾಜಸ್ಥಾನ ಮೂಲದ ವಿದ್ಯಾರ್ಥಿಗಳ ಜತೆಗೆ ಪೇಯಿಂಗ್ ಗೆಸ್ಟ್ ನಲ್ಲಿ ಉಳಿದುಕೊಳ್ಳುತ್ತಿದ್ದರು. ವಿದ್ಯಾರ್ಥಿಗಳೊಂದಿಗೆ ಇರುತ್ತಿದ್ದ ಉತ್ತರಪ್ರದೇಶ, ಜಾರ್ಖಂಡ್, ಬಿಹಾರ ಸೇರಿ ಅನ್ಯ ರಾಜ್ಯದ ವಿದ್ಯಾರ್ಥಿಗಳನ್ನು ಪರಿಚಯ ಮಾಡಿಕೊಂಡು ಸ್ನೇಹ ಬೆಳೆಸಿಕೊಂಡು, ಊಟ, ತಿಂಡಿ, ಪಾರ್ಟಿ ಕೊಟ್ಟು ಅವರೊಂದಿಗೆ ವಿಶ್ವಾಸ ಗಳಿಸಿಕೊಳ್ಳುತ್ತಿದ್ದರು. ನಂತರ ಟ್ರೇಡಿಂಗ್ ಮತ್ತು ಕ್ರಿಪ್ಟೋ ಕರೆನ್ಸಿ ವ್ಯವಹಾರ ನಡೆಸುತ್ತಿದ್ದೇವೆ. ಅದಕ್ಕಾಗಿ ಸಾಕಷ್ಟು ಬ್ಯಾಂಕ್ ಖಾತೆಗಳು ಬೇಕಿದ್ದು, ಸಹಾಯ ಮಾಡಿದರೆ ನಮಗೆ ಸಿಗುವ ಕಮಿಷನ್‌ನಲ್ಲಿ ನಿಮಗೂ ಕೊಡುವುದಾಗಿ ಹೇಳಿ, ನಂಬಿಸಿ ಖಾತೆ ತೆರೆದು ವಂಚಿಸುತ್ತಿದ್ದರು ಎನ್ನಲಾಗಿದೆ.