ಉಡುಪಿ : ಪೊಲೀಸರು ಅಧಿಕಾರಿದ ಅಮಲಿನಲ್ಲಿ ಯುವತಿಯೊಬ್ಬಳ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಘಟನೆ ಉಡುಪಿಯ ಬ್ರಹ್ಮಾವರದಲ್ಲಿ ನಡೆದಿದ್ದು, ಅಕ್ಷತಾ ಪೂಜಾರಿ ಎಂಬ ಯುವತಿ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಈ ಬೆನ್ನಲ್ಲೇ ಜಿಲ್ಲೆಯಾದ್ಯಂತ ಬಿಲ್ಲವ ಸಮುದಾಯ, ಪೊಲೀಸರ ವಿರುದ್ಧಸಿಡಿದೆದ್ದಿದೆ. ಈ ಬಗ್ಗೆ ಉಡುಪಿ ವರಿಷ್ಟಾಧಿಕಾರಿ ಹರಿರಾಂ ಶಂಕರ್ ಮಾತನಾಡಿ, ಈ ಘಟನೆಗೆ ಸಂಬಂಧಿಸಿದಂತೆ ಕಳೆದ ಎರಡು ದಿನಗಳಿಂದ ಬಿಲ್ಲವ ಸಮಾಜದ ಸಂಘಟನೆಗಳು, ಚುನಾಯಿತ ಪ್ರತಿನಿಧಿಗಳು, ಮಹಿಳಾ ಸಂಘಟನೆಗಳ ಮುಖಂಡರು ಹಾಗೂ ರಾಜಕೀಯ ಪಕ್ಷದ ಮುಖಂಡರುಗಳು ಆ ದಿನದ ಘಟನೆಯ ಬಗ್ಗೆ ಬೇರೆ ಬೇರೆ ರೀತಿಯಲ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ. ಆದುದರಿಂದ ಸದ್ಯಕ್ಕೆ ಈ ಪ್ರಕರಣದ ತನಿಖೆಯನ್ನು ಸ್ಥಗಿತಗೊಳಿಸಿ, ತನಿಖೆಯನ್ನು ಬ್ರಹ್ಮಾವರ ಪೊಲೀಸ್ ಠಾಣೆಯಿಂದ ವರ್ಗಾಯಿಸಲು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ.
ಅಲ್ಲದೇ ಸಂತ್ರಸ್ಥ ಮಹಿಳೆಯರು ಇಲಾಖಾ ಸಿಬ್ಬಂದಿಗಳ ಮೇಲೆ ಮಾಡಿರುವ ಆರೋಪಗಳನ್ನು ಇಲಾಖೆಯ ಹಿರಿಯ ಅಧಿಕಾರಿಗಳಿಂದ ವಿಚಾರಣೆ ಪಡಿಸಿ, ಲೋಪಗಳು ಕಂಡುಬಂದಲ್ಲಿ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ನಿರ್ದರಿಸಿದ್ದೇನೆ. ಈ ಘಟನೆಗೆ ಸಂಬಂಧಪಟ್ಟಂತೆ ನ್ಯಾಯ ಒದಗಿಸಬೇಕಾದ ಹಿತದೃಷ್ಠಿಯಿಂದ ಈ ನಿರ್ಧಾರವನ್ನು ಕೈಗೊಂಡಿರುವುದಾಗಿ ಹೇಳಿದ್ದಾರೆ.
ಇದೆಲ್ಲದರ ನಡುವೆ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಇಂದು ಬ್ರಹ್ಮಾವರ ಠಾಣೆಯ ಎದುರುಗಡೆ ನ್ಯಾಯಕ್ಕಾಗಿ ಪ್ರತಿಭಟನೆ ಹಮ್ಮಿಕೊಂಡಿದೆ.
ಏನಿದು ಕೇಸ್?
2014ರಲ್ಲಿ ಅಕ್ಷತಾಳ ದೊಡ್ಡಮ್ಮನ ಮಗ ಆಶಿಕ್ ಎಂಬ ಯುವಕ ಬೈಕ್ ಅಪಘಾತ ಮಾಡಿದ್ದಾನೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಆಶಿಕ್ಗೆ 25 ಲಕ್ಷ ಪರಿಹಾರವನ್ನು ನೀಡಬೇಕು ಎಂದು ಆದೇಶ ನೀಡಿತ್ತು. ಆದರೆ ಆಶಿಕ್ ಪರಿಹಾರ ನೀಡದೆ ತಲೆಮರೆಸಿಕೊಂಡಿದ್ದ ಎಂದು ಹೇಳಲಾಗಿತ್ತು.
ಆರೋಪಿ ಆಶಿಕ್ ನ್ಯಾಯಾಲಯಕ್ಕೆ ಹಾಜರಾಗದೇ ಹಾಗೂ ಹಣವನ್ನು ಕಟ್ಟದೇ ಇರುವುದರಿಂದ, ನ್ಯಾಯಾಲಯವು ಆರೋಪಿಯನ್ನು ದಸ್ತಗಿರಿ ಮಾಡಿ ಉಡುಪಿ ನ್ಯಾಯಾಲಯದ ಮುಂದೆ ಡಿ.17ರ ಒಳಗೆ ಹಾಜರುಪಡಿಸುವಂತೆ ಮಲ್ಪೆ ಪೊಲೀಸ್ ಠಾಣೆಗೆ ಸೂಚನಾ ಪತ್ರ ಹೊರಡಿಸಿ ಆದೇಶ ಮಾಡಿತ್ತು.
ಆತ ಉಪ್ಪೂರಿನಲ್ಲಿರುವ ಅಜ್ಜಿಯ ಮನೆಯಲ್ಲಿ ಇದ್ದಾನೆ ಎಂಬ ಲೊಕೇಶನ್ ಆಧಾರದಲ್ಲಿ ಪೊಲೀಸರು ಮುಂಜಾನೆ 4:00 ಗಂಟೆ ವೇಳೆ ದಾಳಿ ನಡೆಸಿದ್ದಾರೆ. ಈ ವೇಳೆ ಅಕ್ಷತಾ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಅಕ್ಷತಾ ಆರೋಪಿಸುತ್ತಿದ್ದಾಳೆ.
ಪೊಲೀಸರು ಹೇಳುವ ಪ್ರಕಾರ ನ್ಯಾಯಾಲಯದ ಆದೇಶದಂತೆ ಕೆಲಸ ಮಾಡಿದ್ದೇವೆ. ಕಾನೂನು ಪ್ರಕಾರ ಏನು ಮಾಡಬೇಕು ಅದನ್ನು ನಾವು ಮಾಡಿದ್ದೇವೆ. ಜತೆಗೆ ನ್ಯಾಯಾಲಯ ಹೇಳಿದಂತೆ ಆಶಿಕ್ ಮನೆಗೆ ದಾಳಿ ಮಾಡುವ ವೇಳೆ ನಮ್ಮ ಜತೆಗೆ ಕೋರ್ಟ್ ಅಮೀನ್ (ನ್ಯಾಯಾಲಯದಿಂದ ನೇಮಿಸಲ್ಪಟ್ಟ ಅಧಿಕಾರಿ) ಕೂಡ ಇದ್ದರು ಎಂದು ಹೇಳಿದ್ದಾರೆ.
ಇನ್ನು ಈ ದಾಳಿಯ ವೇಳೆ ತನ್ನ ಮೇಲೆ ಹಲ್ಲೆಯಾಗಿದೆ ಎಂದು ಆಶಿಕ್ ನ ಸಹೋದರ ಸಂಬಂಧಿ ಅಕ್ಷತಾ ಪೂಜಾರಿ ಆರೋಪಿಸುತ್ತಿದ್ದಾರೆ. ಪೊಲೀಸರು ದಾಳಿಯ ವೇಳೆ ಅವರ ಜತೆಗೆ ಕೋರ್ಟ್ ಅಮೀನ್ ಇರಲಿಲ್ಲ. ಇನ್ನು ಅವರ ಜತೆಗೆ ಒಬ್ಬ ಮಹಿಳಾ ಪೊಲೀಸ್ ಕೂಡ ಇರಲಿಲ್ಲ ಎಂದು ಅಕ್ಷತಾ ಹೇಳಿದ್ದಾರೆ.
ಇನ್ನು ಈ ಕುರಿತಂತೆ ದೂರು ನೀಡಲು ಹೋದಾಗ ನಮ್ಮ ಮೇಲೆಯೇ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಲಾಗುತ್ತಿದೆ.
ಇದನ್ನೂ ಓದಿ : ತವರಲ್ಲಿದ್ದ ಹೆಂಡತಿಯನ್ನು ಅಟ್ಟಾಡಿಸಿ ಹೊಡೆದ ಕ್ರೂರಿ ಗಂಡ | ಹೆಣ್ಣು ಕೊಟ್ಟ ಅತ್ತೆ, ಮಾವನ ಮೇಲೂ ಹಲ್ಲೆ



















