ಬೆಂಗಳೂರು: ಪೋಕ್ಸೋ ಪ್ರಕರಣದಲ್ಲಿ ಸಿಲುಕಿರುವ ಮಾಜಿ ಸಿಎಂ ಯಡಿಯೂರಪ್ಪಗೆ ಕೋರ್ಟ್ ಮತ್ತೆ ತಾತ್ಕಾಲಿಕ ರಿಲೀಫ್ ನೀಡಿದೆ.
ಶುಕ್ರವಾರ ಕರ್ನಾಟಕ ಹೈಕೋರ್ಟ್ ನಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸಲ್ಲಿಕೆ ಮಾಡಿದ್ದ ಅರ್ಜಿ ವಿಚಾರಣೆ ನಡೆಯಿತು. ವಿಚಾರಣೆ ನಡೆಸಿದ ನ್ಯಾಯಪೀಠ, ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 5ಕ್ಕೆ ಮುಂದೂಡಿತು. ಅಲ್ಲದೇ, ಬಂಧಿಸದಂತೆ ನೀಡಿದ್ದ ಮಧ್ಯಂತರ ಆದೇಶವನ್ನೂ ಮುಂದುವರಿಸಿದೆ.
ದಿನದಿಂದ ದಿನಕ್ಕೆ ಯಡಿಯೂರಪ್ಪ ವಿರುದ್ಧ ಸರ್ಕಾರದ ಪ್ರತಿನಿಧಿಗಳು ಆರೋಪಿಸುತ್ತಿದ್ದಾರೆ. ಯಡಿಯೂರಪ್ಪ ಶರಣಾಗಬೇಕು. ಜೈಲಿಗೆ ಕಳುಹಿಸುತ್ತೇವೆ ಎನ್ನುತ್ತಿದ್ದಾರೆ. ಮಧ್ಯಂತರ ಆದೇಶ ತೆರವುಗೊಳಿಸುತ್ತೇವೆ ಎನ್ನುತ್ತಿದ್ದಾರೆ. ಈಗ ನೋಡಿದರೆ ವಿಚಾರಣೆ ಮುಂದೂಡಿಕೆ ಕೇಳುತ್ತಿದ್ದಾರೆ. ಬರಲಿ ವಾದ ಮಂಡಿಸಲಿ, ಹಣೆಯಲ್ಲಿ ಬರೆದಿದ್ದರೆ ಜೈಲಿಗೆ ಹೋಗುತ್ತಾರೆ ಎಂದು ಯಡಿಯೂರಪ್ಪ ಪರ ವಕೀಲ ನಾಗೇಶ್ ವಾದಿಸಿದರು.
ಸಿಐಡಿ ಪರ ವಕೀಲರು, ಬಿಎಸ್ವೈ ವಿರುದ್ಧ ಹೆಚ್ಚುವರಿ ಆರೋಪಪಟ್ಟಿ ದಾಖಲಿಸಲಾಗಿದೆ. ಆರೋಪಪಟ್ಟಿಯ ಪ್ರತಿ ಸಲ್ಲಿಸಲು ಕಾಲಾವಕಾಶ ಬೇಕಿದೆ ಎಂದು ಎಸ್ಪಿಪಿ ಅಶೋಕ್ ನಾಯ್ಕ್ ಮನವಿ ಮಾಡಿದರು. ಆದರೆ, ಕೋರ್ಟ್ ವಿಚಾರಣೆ ನಡೆಯಿತು. ಜೂನ್ನಲ್ಲಿ ಯಡಿಯೂರಪ್ಪ ವಿರುದ್ಧ ಆರೋಪಪಟ್ಟಿ ಸಲ್ಲಿಕೆ ಮಾಡಲಾಗಿತ್ತು.
ಹಳೇ ಕೇಸ್ ಬಗ್ಗೆ ವಿಚಾರಿಸುತ್ತಾ ರೂಮಿಗೆ ಕರೆದೊಯ್ದು ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿರುವುದಾಗಿ ಯಡಿಯೂರಪ್ಪ ವಿರುದ್ಧದ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಆಗ ಅದನ್ನು ಪ್ರತಿಭಟಿಸಿದಾಗ ಹಣ ನೀಡಿ ಕಳುಹಿಸಿರುವುದಾಗಿ ಆರೋಪಿಸಲಾಗಿದೆ ಎಂದೂ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ಈ ಕುರಿತು ಯಡಿಯೂರಪ್ಪಗೆ ಸಂಕಷ್ಟ ಶುರುವಾಗುವ ಸಾಧ್ಯತೆ ಇದೆ. ಈ ವಿಷಯ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ಜಟಾಪಟಿಗೂ ಕಾರಣವಾಗಿದೆ.