ಬೆಂಗಳೂರು: ದೇಶದ ಬಡವರಿಗಾಗಿಯೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿರುತ್ತದೆ. ಆದರೆ, ಜನರಿಗೆ ಯೋಜನೆ ಬಗ್ಗೆ ಹೆಚ್ಚು ಮಾಹಿತಿ ಇರದ ಕಾರಣ ಅವರು ಯೋಜನೆಯ ಲಾಭ ಪಡೆಯಬಹುದಾಗಿದೆ. ಕೇಂದ್ರ ಸರ್ಕಾರದ ಇಂತಹ ಯೋಜನೆಗಳಲ್ಲಿ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಕೂಡ ಒಂದಾಗಿದೆ. ದೇಶದ ನಾಗರಿಕರು ವರ್ಷಕ್ಕೆ ಕೇವಲ 20 ರೂಪಾಯಿ ಪ್ರೀಮಿಯಂ ಪಾವತಿಸಿದರೂ ಸಾಕು, 2 ಲಕ್ಷ ರೂಪಾಯಿ ವಿಮಾ ಸುರಕ್ಷತೆಯನ್ನು ಈ ಯೋಜನೆ ನೀಡುತ್ತದೆ.
ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ ಅಡಿಯಲ್ಲಿ ವಿಮೆ ಮಾಡಿಸಿದ ವ್ಯಕ್ತಿಯು ಅಪಘಾತದಲ್ಲಿ ಮೃತಪಟ್ಟರೆ, ಆತನ ಕುಟುಂಬದವರಿಗೆ 2 ಲಕ್ಷ ರೂಪಾಯಿ ವಿಮಾ ಪರಿಹಾರ ನೀಡಲಾಗುತ್ತದೆ. ಅಪಘಾತದಲ್ಲಿ ಸಂಪೂರ್ಣ ಅಂಗವೈಕಲ್ಯ ಉಂಟಾದರೆ, ಅಂದರೆ ಎರಡೂ ಕಣ್ಣು, ಕೈ ಅಥವಾ ಕಾಲುಗಳನ್ನು ಕಳೆದುಕೊಂಡರೆ, 2 ಲಕ್ಷ ರೂಪಾಯಿ ಪರಿಹಾರ ಸಿಗುತ್ತದೆ. ಅದೇ ರೀತಿ, ಭಾಗಶಃ ಅಂಗವೈಕಲ್ಯ, ಉದಾಹರಣೆಗೆ ಒಂದು ಕಣ್ಣು, ಒಂದು ಕೈ ಅಥವಾ ಒಂದು ಕಾಲು ಕಳೆದುಕೊಂಡರೆ 1 ಲಕ್ಷ ರೂಪಾಯಿ ದೊರೆಯುತ್ತದೆ.
ಕೇಂದ್ರ ಸರ್ಕಾರದ ಈ ವಿಮಾ ಯೋಜನೆಯ ಪ್ರಯೋಜನ ಪಡೆಯಲು ಅರ್ಜಿದಾರರ ಕನಿಷ್ಠ ವಯಸ್ಸು 18 ವರ್ಷ ಆಗಿರಬೇಕು. ಅದೇ ರೀತಿ, ಗರಿಷ್ಠ 70 ವರ್ಷದೊಳಗಿನ ನಾಗರಿಕರು ಈ ಯೋಜನೆಯ ಲಾಭ ಪಡೆಯಬಹುದು. ವಿಮಾ ಕವರ್ ನ ಅವಧಿ ಒಂದು ವರ್ಷವಾಗಿದ್ದು, ಇದು ಜೂನ್ 1 ರಿಂದ ಮೇ 31 ರವರೆಗೆ ಇರುತ್ತದೆ. ಇದರ ನಂತರ ನೀವು ವಿಮಾ ಪಾಲಿಸಿಯನ್ನು ನವೀಕರಿಸಬೇಕಾಗುತ್ತದೆ.
ವಿಮೆ ಪಡೆಯೋದು ಹೇಗೆ?
ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಯ ಲಾಭ ಪಡೆಯಲು ಅಭ್ಯರ್ಥಿಗಳು ಹತ್ತಿರದ ಪೋಸ್ಟ್ ಆಫೀಸಿಗೆ ಭೇಟಿ ನೀಡಬೇಕು. ಇಲ್ಲವೇ, ಜನ ಸುರಕ್ಷಾ ವೆಬ್ ಸೈಟ್ ಗೆ ಭೇಟಿ ನೀಡಿ, ಅರ್ಜಿಯನ್ನು ಸಲ್ಲಿಸುವ ಮೂಲಕ ವಿಮೆಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಪ್ರತಿ ವರ್ಷ ಬ್ಯಾಂಕ್ ಖಾತೆಯಿಂದ ವಿಮಾ ಪ್ರೀಮಿಯಂ ಕಡಿತವಾಗುತ್ತದೆ.
ಇದನ್ನೂ ಓದಿ: FDA, SDA ಹುದ್ದೆಗಳ ನೇಮಕಾತಿ: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ, ಹೊಸ ಡೇಟ್ ಇಲ್ಲಿದೆ



















