ನವದೆಹಲಿ: ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಸಿಲುಕಿದ್ದ ಭಾರತ ಮೂಲದ ನಾಸಾ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಆದಷ್ಟು ಬೇಗ ಭೂಮಿಗೆ ಬರಲಿ ಎಂದು ಇಡೀ ಜಗತ್ತು ಕಾಯುತ್ತಿದೆ. ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ, ಭಾರತದ ಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿ ಭಾವುಕ ಪತ್ರ ಬರೆದಿದ್ದಾರೆ.
ಸುರಕ್ಷಿತ ಮರಳುವಿಕೆಗೆ ಹಾರೈಸುತ್ತಾ ಪ್ರಧಾನಿ ಮೋದಿ ಭಾರತದ ಶ್ರೇಷ್ಠ ಮಗಳೊಂದಿಗಿನ ಆಳವಾದ ಬಾಂಧವ್ಯವನ್ನು ಪುನರುಚ್ಚರಿಸಿದ್ದಾರೆ. ಸಚಿವ ಜಿತೇಂದ್ರ ಸಿಂಗ್ ಪ್ರಧಾನಿ ಮೋದಿಯವರ ಪತ್ರವನ್ನು ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿರುವ ಭಾರತ ಮೂಲದ ನಾಸಾ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಹಾಗೂ ಸಹ ಗಗನಯಾತ್ರಿ ಬುಚ್ ವಿಲ್ಮೋರ್ ಭೂಮಿಗೆ ಇಂದೇ ಮರಳಲಿದ್ದಾರೆ. ಈ ಇಬ್ಬರು ಮತ್ತು ಇತರ ಇಬ್ಬರು ಗಗನಯಾತ್ರಿಗಳು ಮಂಗಳವಾರ ಸಂಜೆ ಭೂಮಿಗೆ ಮರಳಲಿದ್ದಾರೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಹೇಳಿದೆ. ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಮತ್ತು ಮತ್ತೊಬ್ಬ ಅಮೇರಿಕನ್ ಗಗನಯಾತ್ರಿ ನಿಕ್ ಹೇಗ್ ಮತ್ತು ರಷ್ಯಾದ ಗಗನಯಾತ್ರಿ ಅಲೆಕ್ಸಾಂಡರ್ ಗೋರ್ಬುನೋವ್ ಮಂಗಳವಾರ ಸಂಜೆ 6 ಗಂಟೆ ಸುಮಾರಿಗೆ ಫ್ಲೋರಿಡಾ ಕರಾವಳಿಯಲ್ಲಿ ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಕ್ರಾಫ್ಟ್ ಬಾಹ್ಯಾಕಾಶ ನೌಕೆಯಲ್ಲಿ ಇಳಿಯಬಹುದು ಎಂದು ನಾಸಾ ಹೇಳಿಕೊಂಡಿದೆ.
9 ತಿಂಗಳಿನಿಂದ ಬಾಹ್ಯಾಕಾಶದಲ್ಲಿರುವ ಈ ಇಬ್ಬರು ಭೂಮಿಗೆ ಬಂದ ಮೇಲೆ ಇಲ್ಲಿನ ವಾತಾವರಣಕ್ಕೆ ಒಡ್ಡಿಕೊಳ್ಳುವುದಕ್ಕೆ ಸಮಸ್ಯೆ ಎದುರಿಸಬಹುದು. ಹೀಗಾಗಿ ವಿಲಿಯಮ್ಸ್, ವಿಲ್ಮೋರ್ ಇಬ್ಬರು ದೈಹಿಕ ತೊಂದರೆಗಳನ್ನು ಎದುರಿಸಲಿದ್ದಾರೆ.