ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನವೇ (ಡಿ.1) ರಾಜ್ಯಸಭೆಯಲ್ಲಿ ಸ್ವಾರಸ್ಯಕರ ಪ್ರಸಂಗವೊಂದು ನಡೆದಿದೆ. ನೂತನ ರಾಜ್ಯಸಭಾ ಸಭಾಪತಿಯಾಗಿ ಅಧಿಕಾರ ವಹಿಸಿಕೊಂಡಿರುವ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರನ್ನು ಸ್ವಾಗತಿಸುವ ಭರದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ ಎಂಬ ಚರ್ಚೆ ಹುಟ್ಟಿಕೊಂಡಿದೆ.
ಪ್ರಧಾನಿ ಹೇಳಿದ್ದೇನು?
ನೂತನ ಸಭಾಪತಿ ಸಿ.ಪಿ. ರಾಧಾಕೃಷ್ಣನ್ ಅವರನ್ನು ಅಭಿನಂದಿಸುತ್ತಾ ಪ್ರಧಾನಿ ಮೋದಿ, “ಸಾರ್ವಜನಿಕ ಜೀವನದಲ್ಲಿ ಉನ್ನತ ಹುದ್ದೆಗಳಿಗೆ ಏರಿದಾಗ, ಜನರು ಆಗಾಗ ಆ ಹುದ್ದೆಯ ಭಾರವನ್ನು ಅನುಭವಿಸುತ್ತಾರೆ ಮತ್ತು ಕೆಲವೊಮ್ಮೆ ಶಿಷ್ಟಾಚಾರದ ಕಟ್ಟುಪಾಡುಗಳಿಗೆ ಸಿಲುಕಿಕೊಳ್ಳುತ್ತಾರೆ. ಆದರೆ ನೀವು ಎಂದಿಗೂ ಪ್ರೋಟೋಕಾಲ್ ಅಡಿಯಾಳು ಆಗಿರಲಿಲ್ಲ ಎಂಬುದನ್ನು ನಾನು ನೋಡಿದ್ದೇನೆ. ನೀವು ಅದರಿಂದ ಮೇಲೇರಿ ನಿಲ್ಲುತ್ತೀರಿ,” ಎಂದು ಶ್ಲಾಘಿಸಿದರು.
ಈ ಹೇಳಿಕೆಯು ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಉದ್ದೇಶಿಸಿ ಆಡಿದ ಪರೋಕ್ಷ ಮಾತುಗಳು ಎಂದು ವಿಶ್ಲೇಷಿಸಲಾಗುತ್ತಿದೆ. ಧನಕರ್ ಅವರು ಕಳೆದ ವರ್ಷ ಹಠಾತ್ ರಾಜೀನಾಮೆ ನೀಡಿದ್ದರು.
ಸಿ.ಪಿ. ರಾಧಾಕೃಷ್ಣನ್ ಬಗ್ಗೆ ಮೆಚ್ಚುಗೆ:
ತಮಿಳುನಾಡಿನ ಮೂಲದವರಾದ ಸಿ.ಪಿ. ರಾಧಾಕೃಷ್ಣನ್ ಅವರು ರೈತ ಕುಟುಂಬದಿಂದ ಬಂದವರು. ಜಾರ್ಖಂಡ್ ರಾಜ್ಯಪಾಲರಾಗಿ ಅವರು ಬುಡಕಟ್ಟು ಜನರೊಂದಿಗೆ ಬೆರೆತ ರೀತಿಯನ್ನು ಮೋದಿ ಸ್ಮರಿಸಿದರು. “ನೀವು ಹೆಲಿಕಾಪ್ಟರ್ ಇದೆಯೋ ಇಲ್ಲವೋ ಎಂದು ನೋಡದೆ, ಸಿಕ್ಕ ವಾಹನದಲ್ಲಿ ಹಳ್ಳಿಗಳಿಗೆ ಹೋಗಿ ರಾತ್ರಿ ಅಲ್ಲಿಯೇ ಉಳಿಯುತ್ತಿದ್ದಿರಿ. ನಿಮ್ಮ ಸೇವಾ ಮನೋಭಾವ ನಮಗೆಲ್ಲರಿಗೂ ಸ್ಫೂರ್ತಿ,” ಎಂದು ಮೋದಿ ಬಣ್ಣಿಸಿದರು.
ಕಳೆದ ವರ್ಷ ಮನೆಯಲ್ಲಿ ಭಾರೀ ಪ್ರಮಾಣದ ನೋಟು ಪತ್ತೆ ಪ್ರಕರಣದಲ್ಲಿ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಪದಚ್ಯುತಿಗೆ ವಿಪಕ್ಷಗಳು ನೋಟಿಸ್ ನೀಡಿದ್ದವು. ಅದನ್ನು ಅಂದಿನ ಸಭಾಪತಿ ಜಗದೀಪ್ ಧನಕರ್ ಸ್ವೀಕರಿಸಿದ್ದರು. ಇದು ಸರ್ಕಾರಕ್ಕೆ ಮುಜುಗರ ಉಂಟುಮಾಡಿತ್ತು ಎನ್ನಲಾಗಿದೆ. ಇದಾದ ನಂತರ ಧನಕರ್ ಹಠಾತ್ ರಾಜೀನಾಮೆ ನೀಡಿದ್ದರು. ಅವರ ನಿರ್ಗಮನಕ್ಕೆ ಯಾವುದೇ ಅಧಿಕೃತ ಕಾರಣ ನೀಡಿರಲಿಲ್ಲ.
ಮಲ್ಲಿಕಾರ್ಜುನ ಖರ್ಗೆ- ಜೆ.ಪಿ. ನಡ್ಡಾ ಮಾತಿನ ಚಕಮಕಿ
ಇಂದು ರಾಜ್ಯಸಭೆಯಲ್ಲಿ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡ ಧನಕರ್ ಅವರನ್ನು ನೆನಪಿಸಿಕೊಂಡರು. “ನಮ್ಮ ಹಿಂದಿನ ಸಭಾಪತಿಗಳು ಅನಿರೀಕ್ಷಿತವಾಗಿ ಮತ್ತು ಹಠಾತ್ತನೆ ನಿರ್ಗಮಿಸಿದ್ದು ನನಗೆ ಬೇಸರ ತಂದಿದೆ. ಅವರಿಗೆ ಕನಿಷ್ಠ ಬೀಳ್ಕೊಡುಗೆ ನೀಡಲು ಕೂಡ ಸದನಕ್ಕೆ ಅವಕಾಶ ಸಿಗಲಿಲ್ಲ,” ಎಂದು ಖರ್ಗೆ ವಿಷಾದ ವ್ಯಕ್ತಪಡಿಸಿದರು.
ನೂತನ ಸಭಾಪತಿ ಸಿ.ಪಿ. ರಾಧಾಕೃಷ್ಣನ್ ಅವರನ್ನು ಸ್ವಾಗತಿಸಿ ಮಾತನಾಡಿದ ಖರ್ಗೆ, “ನಿಮ್ಮ ಹಿಂದಿನ ರಾಜ್ಯಸಭಾ ಸಭಾಪತಿ ಧನ್ಕರ್ ಅವರು ಹುದ್ದೆಯಿಂದ ಸಂಪೂರ್ಣ ಅನಿರೀಕ್ಷಿತವಾಗಿ ಮತ್ತು ಹಠಾತ್ತನೆ ನಿರ್ಗಮಿಸಿದ್ದನ್ನು ಇಲ್ಲಿ ಪ್ರಸ್ತಾಪಿಸುತ್ತಿರುವುದಕ್ಕೆ ನೀವು ಬೇಸರಪಟ್ಟುಕೊಳ್ಳಬಾರದು. ಸಭಾಪತಿಗಳು ಇಡೀ ಸದನದ ಪಾಲಕರು (custodian), ಅವರು ಸರ್ಕಾರಕ್ಕೆ ಎಷ್ಟು ಸೇರಿದವರೋ ಅಷ್ಟೇ ವಿರೋಧ ಪಕ್ಷಕ್ಕೂ ಸೇರಿದವರು,” ಎಂದು ಹೇಳಿದರು.
“ನಮ್ಮ ಸದನಕ್ಕೆ ಅವರಿಗೆ ಒಂದು ಗೌರವಯುತ ಬೀಳ್ಕೊಡುಗೆ (farewell) ನೀಡುವ ಅವಕಾಶವೂ ಸಿಗಲಿಲ್ಲ ಎಂಬುದು ನನಗೆ ತೀವ್ರ ನಿರಾಸೆ ತಂದಿದೆ. ಆದಾಗ್ಯೂ, ಇಡೀ ವಿರೋಧ ಪಕ್ಷದ ಪರವಾಗಿ ನಾನು ಅವರಿಗೆ ಉತ್ತಮ ಆರೋಗ್ಯ ಮತ್ತು ಸುದೀರ್ಘ ಜೀವನವನ್ನು ಹಾರೈಸುತ್ತೇನೆ,” ಎಂದು ಖರ್ಗೆ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು.
ನಡ್ಡಾ ಪ್ರತಿಕ್ರಿಯೆ:
ಖರ್ಗೆ ಅವರ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸದನ ನಾಯಕ ಜೆ.ಪಿ. ನಡ್ಡಾ (JP Nadda) ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಖರ್ಗೆ ಹೇಳಿಕೆಯನ್ನು “ಅಪ್ರಸ್ತುತ” ಎಂದು ತಳ್ಳಿಹಾಕಿದ ನಡ್ಡಾ, “ಈಗ ಬೀಳ್ಕೊಡುಗೆ ಬಗ್ಗೆ ಚರ್ಚಿಸುವುದು ಸಮಯ ವ್ಯರ್ಥ. ಇತ್ತೀಚಿನ ಚುನಾವಣಾ ಫಲಿತಾಂಶಗಳಿಂದ (ಬಿಹಾರ, ಹರಿಯಾಣ, ಮಹಾರಾಷ್ಟ್ರ) ನಿಮಗೆ ಆಗಿರುವ ಸೋಲಿನ ಹತಾಶೆಯನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ,” ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ: ಸೋಲಿನ ಹತಾಶೆ ಸಂಸತ್ತಲ್ಲಿ ತೋರಿಸಬೇಡಿ ಎಂದು ವಿಪಕ್ಷಗಳಿಗೆ ಪ್ರಧಾನಿ ಮೋದಿ ಟಾಂಗ್ : ಪ್ರಿಯಾಂಕಾ ತಿರುಗೇಟು



















