ಲಕ್ನೋ: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ತಮ್ಮ ಸಂಸದೀಯ ಕ್ಷೇತ್ರವಾದ ವಾರಾಣಸಿಗೆ(Modi in Varanasi) 50ನೇ ಬಾರಿಗೆ ಭೇಟಿ ನೀಡಿದ್ದಾರೆ. ಇಲ್ಲಿ ಅವರು 3,884 ಕೋಟಿ ರೂಪಾಯಿ ಮೌಲ್ಯದ 44 ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು. ಬೆಳಗ್ಗೆ 10 ಗಂಟೆಗೆ ಲಾಲ್ ಬಹದ್ದೂರ್ ಶಾಸ್ತ್ರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರು, ಹೆಲಿಕಾಪ್ಟರ್ ಮೂಲಕ ಮೆಹದಿಗಂಜ್‌ನ ಸಾರ್ವಜನಿಕ ಸಭೆಯ ಸ್ಥಳಕ್ಕೆ ತೆರಳಿದರು. ಈ ಸಭೆಯಲ್ಲಿ 50,000ಕ್ಕೂ ಅಧಿಕ ಜನರು ಭಾಗವಹಿಸಿದ್ದರು. ಈ ವೇಳೆ 1,629.13 ಕೋಟಿ ರೂಪಾಯಿ ಮೌಲ್ಯದ 19 ಯೋಜನೆಗಳನ್ನು ಅವರು ಉದ್ಘಾಟಿಸಿದ್ದು, 2,255.05 ಕೋಟಿ ರೂಪಾಯಿ ಮೌಲ್ಯದ 25 ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಈ ಪೈಕಿ ಪ್ರಮುಖವಾದದ್ದೆಂದರೆ ವಾರಾಣಸಿ-ಲಕ್ನೋ ರಾಷ್ಟ್ರೀಯ ಹೆದ್ದಾರಿಯಲ್ಲಿ 652.64 ಕೋಟಿ ರೂಪಾಯಿ ವೆಚ್ಚದ ಆರು-ಪಥದ ಸುರಂಗ ಮಾರ್ಗ. ಇದರ ನಿರ್ಮಾಣವು ವಿಮಾನ ನಿಲ್ದಾಣದಿಂದ ನಗರಕ್ಕೆ ಸಂಚಾರವನ್ನು ಸುಗಮಗೊಳಿಸಲಿದೆ. ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆಯಿಂದ ಏಕಕಾಲದಲ್ಲಿ ಎರಡು ವಿಮಾನಗಳು ಇಳಿಯಬಹುದು ಮತ್ತು ಹೊರಡಬಹುದಾಗಿದೆ. ಇದರಿಂದ ದಿನಕ್ಕೆ 110 ವಿಮಾನಗಳ ಸಂಚಾರ ಸಾಧ್ಯವಾಗಲಿದೆ. ಇದೇ ವೇಳೆ ಜಲ ಜೀವನ್ ಮಿಷನ್ ಅಡಿಯ 345.12 ಕೋಟಿ ರೂಪಾಯಿ ವೆಚ್ಚದ 130 ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳಿಗೂ ಚಾಲನೆ ನೀಡಲಾಗಿದ್ದು, ಇವುಗಳು ಶುದ್ಧ ನೀರಿನ ಲಭ್ಯತೆಯನ್ನು ಹೆಚ್ಚಿಸಲಿವೆ. ಶಿವಪುರದಲ್ಲಿ 6.15 ಕೋಟಿ ರೂಪಾಯಿ ವೆಚ್ಚದ ಮಿನಿ ಕ್ರೀಡಾಂಗಣವು ಯೋಗ ಪೆವಿಲಿಯನ್, ವಾಕಿಂಗ್ ಟ್ರ್ಯಾಕ್, ಕ್ರಿಕೆಟ್ ನೆಟ್, ಹಾಕಿ ಮತ್ತು ಫುಟ್‌ಬಾಲ್ ಮೈದಾನಗಳನ್ನು ಒಳಗೊಂಡಿದೆ.
100 ಕೋಟಿ ರೂಪಾಯಿಗಿಂತಲೂ ಅಧಿಕ ವೆಚ್ಚದ ರಸ್ತೆ ವಿಸ್ತರಣೆ ಮತ್ತು ಫ್ಲೈಓವರ್ ಯೋಜನೆಗಳು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲಿವೆ. 1,000 ಕೋಟಿ ರೂಪಾಯಿಗಿಂತಲೂ ಹೆಚ್ಚಿನ ವೆಚ್ಚದ 400kV ಸಬ್‌ಸ್ಟೇಷನ್ ಮತ್ತು ಟ್ರಾನ್ಸ್‌ಮಿಷನ್ ಲೈನ್‌ಗಳು ವಿದ್ಯುತ್ ವಿತರಣೆಯನ್ನು ಬಲಪಡಿಸಲಿವೆ. ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕಾಲೇಜುಗಳು, ಗ್ರಂಥಾಲಯಗಳ ಸ್ಥಾಪನೆಯೂ ಈ ಯೋಜನೆಗಳ ಭಾಗವಾಗಿವೆ. ರಾಮ್‌ನಗರ್ ಪೊಲೀಸ್ ಲೈನ್‌ನಲ್ಲಿ ಟ್ರಾನ್ಸಿಟ್ ಹಾಸ್ಟೆಲ್, ಬ್ಯಾರಕ್‌ಗಳು ಮತ್ತು ಮರುವಾಡಿಯಲ್ಲಿ ರಸ್ತೆ ವಿಸ್ತರಣೆ, ಫ್ಲೈಓವರ್ ಕಾಮಗಾರಿಗಳಿಗೂ ಮೋದಿ ಚಾಲನೆ ನೀಡಿದ್ದಾರೆ.
ಇದೇ ವೇಳೆ ಮೋದಿಯವರು ಬನಾಸ್ ಡೈರಿಯ ರೈತರಿಗೆ 106 ಕೋಟಿ ರೂಪಾಯಿ ಬೋನಸ್ ವಿತರಣೆ, ಜಿಐ ಟ್ಯಾಗ್ ಪ್ರಮಾಣಪತ್ರಗಳು, ಹಿರಿಯ ನಾಗರಿಕರಿಗೆ ಆಯುಷ್ಮಾನ್ ಕಾರ್ಡ್‌ಗಳನ್ನು ವಿತರಿಸಿದರು. ಇದಾದ ಬಳಿಕ ಮೆಹದಿಗಂಜ್‌ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಿದರು. ಮೋದಿ ಭೇಟಿ ಹಿನ್ನೆಲೆಯಲ್ಲಿ ಭದ್ರತೆಗಾಗಿ 4,000ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.