ಚಂಡೀಗಢ: ಪಂಜಾಬ್ ಪ್ರವಾಹಕ್ಕೀಡಾಗಿದೆ. ಅಲ್ಲಿನ ಜನರ ಬದುಕು ಬೀದಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಸೆ. 9ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರವಾಹ ಪೀಡಿತ ಪಂಜಾಬ್ ಗೆ (Punjab) ಭೇಟಿ ನೀಡಲಿದ್ದಾರೆ ಎನ್ನಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಭೇಟಿಯ ಸಂದರ್ಭದಲ್ಲಿ ವಿಶೇಷ ಪ್ಯಾಕೇಜ್ ಘೋಷಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. ಕಳೆದ ಒಂದು ತಿಂಗಳಿಂದ ಪಂಜಾಬ್ ನಲ್ಲಿ ಸಾಕಷ್ಟು ಮಳೆಯಾಗುತ್ತಿದೆ. ಹೀಗಾಗಿ ಹಲವೆಡೆ ಪ್ರವಾಹ ಉಂಟಾಗುತ್ತಿದೆ. ಅಲ್ಲದೇ, ಅಲ್ಲಿನ ಜನರು ಸಂಕಷ್ಟಕ್ಕೆ ಈಡಾಗಿದ್ದಾರೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾರೆ. ಪಂಜಾಬ್‌ನ ಗುರುದಾಸ್ಪುರಕ್ಕೆ (Gurudaspur) ಭೇಟಿ ನೀಡುತ್ತಿದ್ದು, ಪ್ರವಾಹ ಪೀಡಿತ ಪ್ರದೇಶಗಳ ಪರಿಶೀಲನೆ ನಡೆಸಲಿದ್ದಾರೆ.
ಪಂಜಾಬ್ ರಾಜ್ಯದ 14 ಜಿಲ್ಲೆಗಳಲ್ಲಿ ಮಳೆಯಿಂದಾಗಿ ಪ್ರವಾಹ ಉಂಟಾಗಿ ಸಾಕಷ್ಟು ಹಾನಿ ಉಂಟು ಮಾಡಿದೆ. ಇಲ್ಲಿಯವರೆಗೆ ಪ್ರವಾಹಕ್ಕೆ 46 ಜನ ಬಲಿಯಾಗಿದ್ದಾರೆ. ಸುಮಾರು 2 ಸಾವಿರ ಗ್ರಾಮಗಳು ಮುಳುಗಡೆಯಾಗಿವೆ. ಈ ಕುರಿತು ಪಂಜಾಬ್ ರಾಜ್ಯ ಬಿಜೆಪಿ (BJP Punjab) ತನ್ನ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಗುರುದಾಸ್ಪುರ ಭೇಟಿ ವೇಳೆ ಮೋದಿ ಅವರು ಪ್ರವಾಹ ಪೀಡಿತರನ್ನು ಭೇಟಿ ಮಾಡಿ, ಅವರ ಸಮಸ್ಯೆಗಳನ್ನು ಆಲಿಸಲಿದ್ದಾರೆ. ಜೊತೆಗೆ ಪರಿಹಾರಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲಿದ್ದಾರೆ. ಈ ಮೂಲಕ ಕೇಂದ್ರ ಬಿಜೆಪಿ ಸರ್ಕಾರ ಯಾವಾಗಲೂ ಪಂಜಾಬ್ ಜನರೊಂದಿಗಿದೆ ಹಾಗೂ ಕಷ್ಟದಲ್ಲಿ ಸಹಾಯ ಮಾಡುತ್ತದೆಂದು ಸಾಬೀತುಪಡಿಸುತ್ತದೆ ಎಂದು ಮಾಹಿತಿ ನೀಡಿದೆ.