ಉಡುಪಿ : ಎರಡು ದಿನ ಹಿಂದಷ್ಟೇ ಅಯೋಧ್ಯೆಯ ರಾಮ ಮಂದಿರದಲ್ಲಿ ಧರ್ಮ ಧ್ವಜ ಸ್ಥಾಪಿಸಿದ್ದ ಪ್ರಧಾನಿ ಮೋದಿ ಇವತ್ತು ಕೃಷ್ಣನೂರು ಉಡುಪಿಗೆ ಬರುತ್ತಿದ್ದಾರೆ. ಕೃಷ್ಣಮಠದ ವಿಶ್ವಪರ್ಯಾಯ ನಡೆಯುತ್ತಿದ್ದು, ಇದರ ಭಾಗವಾಗಿ ಲಕ್ಷ ಕಂಠ ಗೀತಾ ಪರಾಯಣ ಹಮ್ಮಿಕೊಳ್ಳಲಾಗಿದೆ. ಅಂದರೆ ಒಂದು ಲಕ್ಷಕ್ಕೂ ಹೆಚ್ಚು ಜನ ಭಕ್ತರು ಇಂದು ಕೃಷ್ಣಮಠದ ಕಾರ್ಯಕ್ರಮದಲ್ಲಿ ಭಗವದ್ಗೀತೆ ಪಠಿಸಲಿದ್ದಾರೆ.
ಇದೇ ಐತಿಹಾಸಿಕ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿಯೂ ಸಾಕ್ಷಿ ಆಗಲಿದ್ದಾರೆ. ಸ್ವತಃ ಮೋದಿಯೇ ಭಗವದ್ಗೀತೆಯ 15ನೇ ಅಧ್ಯಾಯದ ಶ್ಲೋಕಗಳನ್ನು ಪಠಿಸಲಿದ್ದಾರೆ. ಗೀತೆಯಲ್ಲಿ ಹೆಚ್ಚಿನ ಮಹತ್ವ ಹೊಂದಿರುವ 15ನೇ ಅಧ್ಯಾಯದ ಕೊನೆಯ 10 ಶ್ಲೋಕಗಳನ್ನು ಪಠಿಸಲಿದ್ದಾರೆ.
ಪ್ರಧಾನಿ ಮೋದಿಯನ್ನ ಸ್ವಾಗತಿಸಲು ಉಡುಪಿ ಸಜ್ಜಾಗಿ ನಿಂತಿದ್ದು, ಪ್ರಧಾನಿ ಮೋದಿ ಕೂಡ ಈ ಬಗ್ಗೆ ಕನ್ನಡದಲ್ಲೇ ಎಕ್ಸ್ ಸಂದೇಶ ಪ್ರಕಟಿಸಿ ಮಾಡಿ ಸಂತಸ ಹಂಚಿಕೊಂಡಿದ್ದಾರೆ.
ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ದೊರೆತಿರುವುದು ನನಗೆ ಗೌರವದ ವಿಷಯ. ಗೀತಾ ಪಠಣಕ್ಕಾಗಿ ಸಮಾಜದ ವಿವಿಧ ವರ್ಗಗಳ ಜನರನ್ನು ಒಂದೆಡೆ ಸೇರಿಸುವ ವಿಶೇಷ ಕಾರ್ಯಕ್ರಮ ಇದಾಗಿದೆ. ಈ ಮಠವು ನಮ್ಮ ಸಾಂಸ್ಕೃತಿಕ ಜೀವನದಲ್ಲಿ ಅತ್ಯಂತ ವಿಶೇಷ ಮಹತ್ವವನ್ನು ಹೊಂದಿದೆ. ಶ್ರೀ ಮಧ್ವಾಚಾರ್ಯರಿಂದ ಪ್ರೇರಿತವಾದ ಈ ಮಠವು, ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದೆ ಎಂದು ನರೇಂದ್ರ ಮೋದಿ ಉಲ್ಲೇಖಿಸಿದ್ದಾರೆ.
ಉಡುಪಿ ನಗರದಾದ್ಯಂತ ಬಿಗಿ ಭದ್ರತೆ
ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಉಡುಪಿ ನಗರದಾದ್ಯಂತ ಬಿಗಿ ಭದ್ರತೆ ಏರ್ಪಡಿಸಲಾಗಿದ್ದು, ಡ್ರೋನ್ ಹಾರಾಟ ನಿಷೇಧಿಸಲಾಗಿದೆ. ಮಠದ ಆಸುಪಾಸಿನ ಪ್ರದೇಶಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.
ಬಂದೋಬಸ್ತ್ಗೆ 3000ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. 10 ಮಂದಿ ಎಸ್ಪಿ, 27 DySPಗಳು, 49 ಇನ್ಸ್ಪೆಕ್ಟರ್ಗಳು, 127 PSI, 232 ASI, 1608 ಪಿಸಿಗಳು, 39 ಮಹಿಳಾ ಸಿಬ್ಬಂದಿ, 6 KSRP ತುಕಡಿ, 6 ಕ್ಯೂಆರ್‌ಟಿ ತಂಡಗಳನ್ನ ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಮಾರ್ಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ರೋಡ್ ಶೋ ಮಾರ್ಗದುದ್ದಕ್ಕೂ ಪೊಲೀಸರಿಂದ ನಿರಂತರ ತಪಾಸಣೆ ನಡೆಸಲಾಗಿದೆ. ಜತೆಗೆ ನಗರದ ಎಲ್ಲಾ ಕಡೆ ಬಾಂಬ್ ಸ್ಕ್ವಾಡ್ಗಳಿಂದ ತಪಾಸಣೆ ನಡೆಸಲಾಗ್ತಿದೆ. ಇದಿಷ್ಟೇ ಅಲ್ಲದೆ, ಬೆಳಗ್ಗೆ 8 ರಿಂದ ಮಧ್ಯಾಹ್ನ 3 ರವರೆಗೆ ಶ್ರೀ ಕೃಷ್ಣ ಮಠಕ್ಕೆ ಸಾರ್ವಜನಿಕರ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಇದನ್ನೂ ಓದಿ: ಭಾರತದಲ್ಲಿ ಇದ್ದಕ್ಕಿದ್ದಂತೆ ಗೂಗಲ್ ಮೀಟ್ ಡೌನ್ | ಬಳಕೆದಾರರ ಪರದಾಟ



















