ನವದೆಹಲಿ: 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರದೇ ಇರುತ್ತಿದ್ದರೆ, ಹಿಂದಿನ ಕಾಂಗ್ರೆಸ್ ಸರ್ಕಾರವು ದೇಶದ ಸಂಸತ್ ಭವನ ಮತ್ತು ವಿಮಾನ ನಿಲ್ದಾಣಗಳ ಭೂಮಿಯನ್ನೂ ವಕ್ಫ್‌ಗೆ ನೀಡುತ್ತಿತ್ತು ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಆರೋಪಿಸಿದದಾರೆ. ಬುಧವಾರ ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆಯನ್ನು ಮಂಡಿಸುವ ವೇಳೆ ಅವರು ಈ ಆರೋಪವನ್ನು ಮಾಡಿದ್ದಾರೆ.
ವಕ್ಫ್ ವಿಧೇಯಕ ವಿರೋಧಿಸಿ ಪ್ರತಿಪಕ್ಷಗಳ ಘೋಷಣೆಗಳು, ಪ್ರತಿಭಟನೆಗಳು ಹಾಗೂ ಗದ್ದಲಗಳ ನಡುವೆಯೇ ರಿಜಿಜು ಮಾತನಾಡಿ, “ಯುಪಿಎ ಸರ್ಕಾರವು ಸಂಸತ್ತು ಮತ್ತು ವಿಮಾನ ನಿಲ್ದಾಣಗಳ ಭೂಮಿಯನ್ನು ವಕ್ಫ್‌ಗೆ ನೀಡುತ್ತಿತ್ತು. ಆದರೆ, ಸಂಸತ್ತನ್ನು ವಕ್ಫ್ ಸ್ವಾಧೀನಪಡಿಸಿಕೊಳ್ಳುವುದನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಡೆದರು” ಎಂದು ಹೇಳಿದ್ದಾರೆ.
ಮುಸ್ಲಿಮರು ದಾನ ಮಾಡಿದ ಆಸ್ತಿಗಳ ನಿರ್ವಹಣೆಯನ್ನು ನಿಯಂತ್ರಿಸುವ 1995 ರ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಪ್ರಯತ್ನಿಸುವ ಈ ಮಸೂದೆಯು ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷಗಳ ನಡುವಿನ ವಾಗ್ವಾದಕ್ಕೆ ಕಾರಣವಾಗಿದ್ದು, ಇಂದು ಲೋಕಸಭೆಯಲ್ಲಿ ಈ ಮಸೂದೆ ಮಂಡನೆಯಾಗುತ್ತಿದ್ದಂತೆಯೇ ಸದನ ಗದ್ದಲದ ಗೂಡಾಯಿತು.
ಸಂಸತ್ತಿನಲ್ಲಿ ವಕ್ಫ್ ಮಸೂದೆ
ವಕ್ಫ್ ಮಸೂದೆಯನ್ನು ಮಂಡಿಸಿದ ಕೇಂದ್ರ ಸಚಿವ ಕಿರಣ್ ರಿಜಿಜು ಅವರು, ಈ ಮಸೂದೆಯ ಅಗತ್ಯತೆಯನ್ನು ವಿವರಿಸಿದರು. ವಕ್ಫ್ ಮಸೂದೆ ಕಾನೂನುಬಾಹಿರ ಎಂಬ ಪ್ರತಿಪಕ್ಷಗಳ ಆರೋಪವನ್ನು ತಿರಸ್ಕರಿಸಿದ ಅವರು, ಈ ಕಾನೂನು ಸ್ವಾತಂತ್ರ್ಯ ಪೂರ್ವದಷ್ಟು ಹಿಂದಿನದು ಎಂದು ಹೇಳಿದರು. “ಈ ಮಸೂದೆ ಹೊಸದೇನಲ್ಲ. ಸ್ವಾತಂತ್ರ್ಯದ ನಂತರ, 1954ರಲ್ಲಿ, ವಕ್ಫ್ ಕಾಯ್ದೆಯನ್ನು ಸಂಯೋಜಿಸಲಾಯಿತು. ಈ ಕಾಯ್ದೆಯಲ್ಲಿ ರಾಜ್ಯ ವಕ್ಫ್ ಮಂಡಳಿಗಳನ್ನು ಸೇರಿಸಲಾಯಿತು. ಆಗ ಯಾರೂ ಅದನ್ನು ಏಕೆ ಆಕ್ಷೇಪಿಸಲಿಲ್ಲ? ಎಂದು ಪ್ರಶ್ನಿಸಿದರು.
ಬಡ ಮುಸ್ಲಿಮರಿಗಾಗಿ ಬಳಕೆ
ಜಾಗತಿಕವಾಗಿ ಭಾರತವು ಅತಿಹೆಚ್ಚು ವಕ್ಫ್ ಆಸ್ತಿಗಳನ್ನು ಹೊಂದಿದೆ. ಅದನ್ನು ಬಡ ಮುಸ್ಲಿಮರ ಅನುಕೂಲಕ್ಕಾಗಿ ಬಳಸಬೇಕಾದ ಅಗತ್ಯವಿದೆ. ಇಂದು ಈ ಮಸೂದೆಯನ್ನು ಯಾರು ಬೆಂಬಲಿಸುತ್ತಿದ್ದಾರೆ ಮತ್ತು ಯಾರು ವಿರೋಧಿಸುತ್ತಿದ್ದಾರೆ ಎಂಬುದನ್ನು ಜನರು ನೆನಪಿಟ್ಟುಕೊಳ್ಳುತ್ತಾರೆ. ವಕ್ಫ್ ಆಸ್ತಿಗಳನ್ನು ಹಾಗೆಯೇ ಇರಲು ಬಿಡುವುದಿಲ್ಲ. ಅದನ್ನು ಬಡ ಮುಸ್ಲಿಮರಿಗೆ ನೆರವಾಗುವಂತೆ ಬಳಸಲಾಗುತ್ತದೆ ಎಂದೂ ರಿಜಿಜು ಹೇಳಿದರು. ವಕ್ಫ್ ಮಂಡಳಿಯನ್ನು ನೈಜವಾದ ಜಾತ್ಯತೀತ ಸಂಸ್ಥೆಯನ್ನಾಗಿ ಬದಲಾಯಿಸುವುದು ನಮ್ಮ ಸರ್ಕಾರದ ಉದ್ದೇಶವಾಗಿದೆ ಎಂದೂ ಅವರು ಹೇಳಿದರು.