ಪಣಜಿ: ಪ್ರತಿ ವರ್ಷದ ದೀಪಾವಳಿ ಹಬ್ಬವನ್ನೂ ಯೋಧರೊಂದಿಗೆ ಆಚರಿಸುವ ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿ ಗೋವಾ ಮತ್ತು ಕಾರವಾರ ಕರಾವಳಿಯ ಐಎನ್ಎಸ್ ವಿಕ್ರಾಂತ್ ಯುದ್ಧನೌಕೆಯಲ್ಲಿ ನೌಕಾಪಡೆಯ ಯೋಧರೊಂದಿಗೆ ಬೆಳಕಿನ ಹಬ್ಬವನ್ನು ಆಚರಿಸಿದ್ದಾರೆ. ಈ ವೇಳೆ, ‘ಆಪರೇಷನ್ ಸಿಂದೂರ’ ಸಂದರ್ಭದಲ್ಲಿ ಐಎನ್‌ಎಸ್ ವಿಕ್ರಾಂತ್ ಪಾಕಿಸ್ತಾನವನ್ನು ಹೇಗೆ ಮಂಡಿಯೂರುವಂತೆ ಮಾಡಿತ್ತು ಎಂಬುದನ್ನು ಸ್ಮರಿಸಿಕೊಂಡು ನೌಕಾಪಡೆಯನ್ನು ಶ್ಲಾಘಿಸಿದರು.
“ಐಎನ್‌ಎಸ್ ವಿಕ್ರಾಂತ್ ಭಾರತೀಯ ಸಶಸ್ತ್ರ ಪಡೆಗಳ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ. ‘ಆಪರೇಷನ್ ಸಿಂದೂರ’ ಸಮಯದಲ್ಲಿ ಕೆಲವೇ ದಿನಗಳಲ್ಲಿ ಪಾಕಿಸ್ತಾನವನ್ನು ಮಂಡಿಯೂರುವಂತೆ ಮಾಡಿತ್ತು. ಇದು ಕೇವಲ ಯುದ್ಧನೌಕೆಯಲ್ಲ, ಬದಲಿಗೆ 21ನೇ ಶತಮಾನದ ಭಾರತದ ಕಠಿಣ ಪರಿಶ್ರಮ, ಪ್ರತಿಭೆ ಮತ್ತು ಬದ್ಧತೆಯ ದ್ಯೋತಕವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಈ ಕಾರ್ಯಾಚರಣೆಯ ಸಂದರ್ಭದಲ್ಲಿ ವಿಕ್ರಾಂತ್, ಪಾಕಿಸ್ತಾನಕ್ಕೆ ನಿದ್ದೆಯಿಲ್ಲದ ರಾತ್ರಿಗಳನ್ನು ನೀಡಿತ್ತು ಎಂದು ಅವರು ಬಣ್ಣಿಸಿದ್ದಾರೆ.

ಮೇ 2025 ರಲ್ಲಿ ನಡೆದ ‘ಆಪರೇಷನ್ ಸಿಂದೂರ’ದ ವೇಳೆ, ಪಾಕಿಸ್ತಾನಿ ನೌಕಾಪಡೆಯು ಯಾವುದೇ ರೀತಿಯಲ್ಲಿ ಪ್ರತಿದಾಳಿ ನಡೆಸದಂತೆ ತಡೆಯುವಲ್ಲಿ ಐಎನ್‌ಎಸ್ ವಿಕ್ರಾಂತ್ ನೇತೃತ್ವದ ನೌಕಾಪಡೆಯ ಸಮರ ಗುಂಪು (Carrier Battle Group) ಪ್ರಮುಖ ಪಾತ್ರ ವಹಿಸಿತ್ತು. ಈ ಕಾರ್ಯಾಚರಣೆಯು ಭಾರತದ ಮಿಲಿಟರಿಯ ಸಾಮರ್ಥ್ಯವನ್ನು ಸಾಬೀತುಪಡಿಸಿತ್ತು.
ಐಎನ್‌ಎಸ್ ವಿಕ್ರಾಂತ್‌ನಲ್ಲಿ ರಾತ್ರಿ ಕಳೆದ ಪ್ರಧಾನಿ ಮೋದಿ, ಆ ಅನುಭವವನ್ನು ಹಂಚಿಕೊಂಡರು. “ಕ್ಷಣದಲ್ಲಿ ಬದುಕುವುದರ ಮಹತ್ವವನ್ನು ನಾನು ಕಲಿತಿದ್ದೇನೆ. ನಿಮ್ಮ ಸಮರ್ಪಣಾ ಭಾವ ಎಷ್ಟೊಂದು ದೊಡ್ಡದಾಗಿದೆಯೆಂದರೆ, ನಾನು ಅದನ್ನು ಸಂಪೂರ್ಣವಾಗಿ ಅನುಭವಿಸಲು ಸಾಧ್ಯವಾಗಲಿಲ್ಲ, ಆದರೆ ಖಂಡಿತವಾಗಿಯೂ ಅದರ ಅನುಭೂತಿಯನ್ನು ಪಡೆದಿದ್ದೇನೆ. ಪ್ರತಿದಿನ ಇದನ್ನು ಎದುರಿಸುವುದು ಎಷ್ಟು ಸವಾಲಿನದ್ದಾಗಿರಬಹುದು ಎಂದು ನಾನು ಊಹಿಸಬಲ್ಲೆ” ಎಂದರು.
ನೌಕಾ ಸಿಬ್ಬಂದಿ ಹಾಡಿದ ದೇಶಭಕ್ತಿ ಗೀತೆಗಳು ಮತ್ತು ‘ಆಪರೇಷನ್ ಸಿಂದೂರ’ವನ್ನು ಅದರಲ್ಲಿ ಚಿತ್ರಿಸಿದ ರೀತಿ ನನ್ನನ್ನು ಭಾವುಕನನ್ನಾಗಿಸಿತು ಎಂದು ಪ್ರಧಾನಿ ಹೇಳಿದರು. “ಸೂರ್ಯನ ಕಿರಣಗಳು ಸಮುದ್ರದ ನೀರಿನ ಮೇಲೆ ಬೀಳುವ ಹೊಳಪು, ವೀರ ಸೈನಿಕರು ಹಚ್ಚಿದ ದೀಪಾವಳಿ ದೀಪಗಳಂತಿವೆ” ಎಂದು ಅವರು ಬಣ್ಣಿಸಿದರು.