ಅಹಮದಾಬಾದ್: ಮೂರು ದಿನಗಳ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಮಂಗಳವಾರ ಅನಂತ್ ಅಂಬಾನಿ ಅವರ ಪ್ರಾಣಿ ಸಂರಕ್ಷಣೆ ಮತ್ತು ಪುನರ್ವಸತಿ ಕೇಂದ್ರವಾದ ವನತಾರಾವನ್ನು ಉದ್ಘಾಟಿಸಿದರು.
PM Shri @narendramodi inaugurates Vantara, the world's largest rescue, rehabilitation, and conservation center in Gujarat. PM Modi feeds lion cubs at Vantara. pic.twitter.com/JRDHh4PH2L
— Chandrashekhar (@chshekharbjp) March 4, 2025
ವನತಾರಾ ಕೇಂದ್ರವು 2,000ಕ್ಕೂ ಹೆಚ್ಚು ಪ್ರಭೇದಗಳು ಮತ್ತು 1.5 ಲಕ್ಷಕ್ಕೂ ಹೆಚ್ಚು ರಕ್ಷಿಸಲ್ಪಟ್ಟ, ಅಳಿವಿನಂಚಿನಲ್ಲಿರುವ ಪ್ರಾಣಿಗಳಿಗೆ ನೆಲೆಯಾಗಿದೆ. ಇದು ರಿಲಯನ್ಸ್ ಜಾಮ್ನಗರ್ ಸಂಸ್ಕರಣಾ ಸಂಕೀರ್ಣದಲ್ಲಿ 3000 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ ಮತ್ತು ಅತ್ಯಾಧುನಿಕ ಪ್ರಾಣಿ ರಕ್ಷಣೆ ಮತ್ತು ಪುನರ್ವಸತಿ ಕೇಂದ್ರವೂ ಆಗಿದೆ.
ವೀಡಿಯೋದಲ್ಲಿ, ಪ್ರಧಾನಿ ಮೋದಿಯವರು ಅಲ್ಲಿ ಪುನರ್ವಸತಿ ಕಲ್ಪಿಸಲಾದ ವಿವಿಧ ಜಾತಿಯ ಪ್ರಾಣಿಗಳೊಂದಿಗೆ ಬೆರೆಯುತ್ತಾ, ಸಮಯ ಕಳೆದಿರುವ ದೃಶ್ಯಗಳು ಸೆರೆಯಾಗಿವೆ.
ಒರಾಂಗುಟಾನ್‌ಗಳು, ಏಷ್ಯಾಟಿಕ್ ಸಿಂಹದ ಮರಿಗಳು, ಬಿಳಿ ಸಿಂಹದ ಮರಿ ಮತ್ತು ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಕ್ಲೌಡೆಡ್ ಚಿರತೆ ಮರಿ ಸೇರಿದಂತೆ ಹಲವು ಪ್ರಾಣಿಗಳೊಂದಿಗೆ ಪ್ರಧಾನಿ ಮೋದಿ ಆಟವಾಡುತ್ತಾ, ಅವುಗಳಿಗೆ ಆಹಾರವನ್ನು ನೀಡಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಇದಾದ ಬಳಿಕ ಪ್ರಧಾನಿ ಮೋದಿ ಅವರು ವನತಾರಾ ಕೇಂದ್ರದಲ್ಲಿನ ವಿವಿಧ ಸೌಲಭ್ಯಗಳನ್ನು ವೀಕ್ಷಿಸಿದರು. ವನತಾರಾ ವನ್ಯಜೀವಿ ಆಸ್ಪತ್ರೆಗೂ ಭೇಟಿ ನೀಡಿದ ಅವರು, ಎಂಆರ್ ಐ, ಸಿಟಿ ಸ್ಕ್ಯಾನ್, ಐಸಿಯು ಸೇರಿದಂತೆ ಪಶುವೈದ್ಯಕೀಯ ಸೌಲಭ್ಯಗಳನ್ನು ವೀಕ್ಷಿಸಿದರು ಮತ್ತು ವನ್ಯಜೀವಿ ಅರಿವಳಿಕೆ, ಹೃದ್ರೋಗ, ನೆಫ್ರಾಲಜಿ, ಎಂಡೋಸ್ಕೋಪಿ, ದಂತವೈದ್ಯಕೀಯ, ಆಂತರಿಕ ಔಷಧ ಸೇರಿದಂತೆ ಅನೇಕ ವಿಭಾಗಗಳನ್ನು ಪರಿಶೀಲಿಸಿದರು.
ಇದನ್ನೂ ಓದಿ : ಪ್ರಧಾನಿ ನರೇಂದ್ರ ಮೋದಿಗೆ ಸಲಹೆ ನೀಡಿದ ಸಿಎಂ ಸಿದ್ದರಾಮಯ್ಯ
ವಿಶ್ವ ವನ್ಯಜೀವಿ ದಿನಾಚರಣೆಯ ಅಂಗವಾಗಿ ಸೋಮವಾರವಷ್ಟೇ ಅವರು ಗುಜರಾತ್‌ನ ಗಿರ್ ವನ್ಯಜೀವಿ ರಕ್ಷಿತಾರಣ್ಯದಲ್ಲಿ ಲಯನ್ ಸಫಾರಿ ಕೈಗೊಂಡಿದ್ದರು. ಬಳಿಕ ವನ್ಯಜೀವಿ ಮಂಡಳಿಯ ಸಭೆಯ ನೇತೃತ್ವವನ್ನೂ ವಹಿಸಿದ್ದರು. ಈ ಸಂದರ್ಭದಲ್ಲಿ ಅವರು ಮೇ ತಿಂಗಳಿಂದ ದೇಶದಲ್ಲಿ ಸಿಂಹ ಗಣತಿ ಆರಂಭಿಸುವುದಾಗಿ ಘೋಷಿಸಿದ್ದರು. ಅಲ್ಲದೇ, ಚೀತಾ ಸಂರಕ್ಷಣೆ ಯೋಜನೆಯನ್ನು ಗುಜರಾತ್ ಸೇರಿದಂತೆ ಇತರೆ ರಾಜ್ಯಗಳಿಗೂ ವಿಸ್ತರಣೆ ಮಾಡುವ ಯೋಜನೆ ಹಾಕಿಕೊಂಡಿರುವುದಾಗಿ ತಿಳಿಸಿದ್ದರು. ಬಳಿಕ, ಅರಣ್ಯ ಇಲಾಖೆಯ ಮಹಿಳಾ ಸಿಬ್ಬಂದಿಯೊಂದಿಗೂ ಮೋದಿ ಸಂವಾದ ನಡೆಸಿದ್ದರು.