ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ(Pahalgam Attack) ಉಗ್ರರ ಹೆಡೆಮುರಿ ಕಟ್ಟಲು ಸೇನೆಗೆ ಪರಮಾಧಿಕಾರ ನೀಡಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿಯವರು ಇಂದು ಮಹತ್ವದ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನತೆ ಸೃಷ್ಟಿಯಾಗಿರುವಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಈ ನಡೆ ಮಹತ್ವ ಪಡೆದಿದೆ. ಭದ್ರತೆಗೆ ಸಂಬಂಧಿಸಿದ ಎರಡನೇ ಕ್ಯಾಬಿನೆಟ್ ಸಮಿತಿ, ರಾಜಕೀಯ ವ್ಯವಹಾರಗಳ ಮೊದಲ ಕ್ಯಾಬಿನೆಟ್ ಸಮಿತಿಯ ಸಭೆಗಳು ನಡೆದಿವೆ. ಒಂದು ವಾರದೊಳಗೆ ನಡೆದ ಭದ್ರತೆ ಕುರಿತ ಸಂಪುಟ ಸಮಿತಿಯ 2ನೇ ಸಭೆ ಇದಾಗಿದೆ. ಇದಲ್ಲದೇ ತಮ್ಮ ನಿವಾಸದಲ್ಲಿ ಸಂಪುಟ ಸಭೆಯನ್ನೂ ಮೋದಿ ನಡೆಸಿದ್ದಾರೆ.
ರಾಜಕೀಯ ವ್ಯವಹಾರಗಳಿಗೆ ಸಂಬಂಧಿಸಿದ ಸಂಪುಟ ಸಮಿತಿ(ಸಿಸಿಪಿಎ) ಎನ್ನುವುದು ಕೇಂದ್ರ ಸಂಪುಟದಲ್ಲಿನ ಬಲಿಷ್ಠ ಸಮೂಹವಾಗಿದ್ದು, ಇದನ್ನು ಸೂಪರ್ ಕ್ಯಾಬಿನೆಟ್ ಎಂದೂ ಕರೆಯಲಾಗುತ್ತದೆ. 26 ಜನರನ್ನು ಬಲಿಪಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮಾರನೇ ದಿನವೇ ಅಂದರೆ ಏಪ್ರಿಲ್ 23 ರಂದು ಪ್ರಧಾನಿ ಮೋದಿಯವರ ನೇತೃತ್ವದ ಮೊದಲ ಸಿಸಿಎಸ್ ಸಭೆ ನಡೆದಿತ್ತು. ಅಲ್ಲೇ ಸರ್ಕಾರವು ಪಾಕಿಸ್ತಾನದ ವಿರುದ್ಧ ಹಲವು ಮಿಲಿಟರಿಯೇತರ ಕ್ರಮಗಳನ್ನು ಘೋಷಿಸಿತ್ತು. ಈ ಪೈಕಿ ಸಿಂಧೂ ಜಲ ಒಪ್ಪಂದ ಅಮಾನತು, ಅಟ್ಟಾರಿ ಗಡಿಯನ್ನು ಮುಚ್ಚುವುದು ಮತ್ತು ಭಾರತದಲ್ಲಿ ವಾಸಿಸುವ ಪಾಕಿಸ್ತಾನಿ ಪ್ರಜೆಗಳಿಗೆ ಎಲ್ಲಾ ವೀಸಾಗಳನ್ನು ರದ್ದುಪಡಿಸುವುದು ಮತ್ತಿತರ ಕ್ರಮಗಳು ಸೇರಿದ್ದವು.
ಇಂದಿನ ಸಿಸಿಪಿಎ ಸಭೆ ಏಕೆ ನಿರ್ಣಾಯಕ?
2019ರಲ್ಲಿ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಕನಿಷ್ಠ 40 ಸಿಆರ್‌ಪಿಎಫ್ ಯೋಧರು ಸಾವನ್ನಪ್ಪಿದ ನಂತರ ನಡೆದ ಸಿಸಿಪಿಎ ಸಭೆಯೇ ಈವರೆಗಿನ ಕೊನೆಯ ಸಭೆಯಾಗಿತ್ತು. ಅಂದಿನ ಪರಿಸ್ಥಿತಿಯನ್ನು ಪರಿಶೀಲಿಸಲು ಮತ್ತು ಭೀಕರ ದಾಳಿಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ಯೋಜಿಸಲು ಸಭೆ ನಡೆದಿತ್ತು. ಈ ಸಭೆಯಲ್ಲಿಯೇ ಭಾರತವು ಪಾಕಿಸ್ತಾನದ ‘ಮೋಸ್ಟ್ ಫೇವರ್ಡ್ ನೇಷನ್’ ವ್ಯಾಪಾರ ಸ್ಥಾನಮಾನವನ್ನು ತೆಗೆದುಹಾಕಲು ನಿರ್ಧರಿಸಿತ್ತು. ಇದಾದ ಕೆಲವು ದಿನಗಳ ನಂತರ, ಫೆಬ್ರವರಿ 26 ರಂದು, ಭಾರತೀಯ ವಾಯುಪಡೆಯು ಬಾಲಾಕೋಟ್‌ನಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ವೈಮಾನಿಕ ದಾಳಿ ನಡೆಸುವ ಮೂಲಕ ಪಾಕಿಸ್ತಾನಕ್ಕೆ ದೊಡ್ಡ ಹೊಡೆತ ನೀಡಿತ್ತು. ಈ ಎಲ್ಲ ನಿದರ್ಶನಗಳನ್ನು ಪರಿಗಣಿಸಿದರೆ, ಇಂದು ನಡೆಯುತ್ತಿರುವ ಸಿಸಿಪಿಎ ಸಭೆ ನಿರ್ಣಾಯಕವಾಗಿದೆ.
ಸಿಸಿಪಿಎ ಏನು ಮಾಡುತ್ತದೆ?
ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿ ಸಭೆಗಳು ದೇಶದ ಪ್ರಮುಖ ರಾಜಕೀಯ ಮತ್ತು ಆರ್ಥಿಕ ವಿಷಯಗಳ ಬಗ್ಗೆ ಚರ್ಚಿಸಲು ಮತ್ತು ನಿರ್ಧರಿಸುವ ನಿಟ್ಟಿನಲ್ಲಿ ನಿರ್ಣಾಯಕ ಸಮಯದಲ್ಲಿ ನಡೆಯುತ್ತವೆ. ಇದು ಪ್ರಾಥಮಿಕವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಂಬಂಧದ ಮೇಲೂ ಕೇಂದ್ರೀಕರಿಸಿರುತ್ತದೆ. ದೇಶದ ರಾಜಕೀಯ ಪರಿಸ್ಥಿತಿಯ ಮೇಲೆ ಪ್ರಭಾವ ಬೀರುವ ವಿದೇಶಾಂಗ ನೀತಿ ವಿಷಯಗಳೊಂದಿಗೂ ಸಿಸಿಪಿಎ ವ್ಯವಹರಿಸುತ್ತದೆ. ರಾಜಕೀಯದ ಮೇಲೆ ಪರಿಣಾಮ ಬೀರುವ ಆರ್ಥಿಕ ನೀತಿಗಳು ಮತ್ತು ಆಂತರಿಕ ಭದ್ರತಾ ವಿಷಯಗಳ ಬಗ್ಗೆಯೂ ಇಂಥ ಸಭೆಯಲ್ಲಿ ಚರ್ಚಿಸಲಾಗುತ್ತದೆ. ಇದಲ್ಲದೆ, ಗಂಭೀರ ರಾಜಕೀಯ ಪರಿಣಾಮ ಬೀರುವ ವಿಷಯಗಳ ಬಗ್ಗೆ ವಿವಿಧ ಸಚಿವಾಲಯಗಳು ಒಟ್ಟಾಗಿ ಕೆಲಸ ಮಾಡಲು ಇದು ಸಹಾಯ ಮಾಡುತ್ತದೆ.
ಸಿಸಿಪಿಎ ಸದಸ್ಯರು ಯಾರು?
ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಆರೋಗ್ಯ ಸಚಿವ ಜೆ.ಪಿ.ನಡ್ಡಾ ಮತ್ತು ಇತರ ಹಿರಿಯ ಸಚಿವರು ಸಿಸಿಪಿಎ ಸದಸ್ಯರಾಗಿದ್ದಾರೆ.



















