ನವದೆಹಲಿ: 79ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪುಕೋಟೆಯಿಂದ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶದ ಜನತೆಗೆ ದೀಪಾವಳಿ ಬಂಪರ್ ಉಡುಗೊರೆ ಘೋಷಿಸಿದ್ದಾರೆ. ಮುಂದಿನ ಪೀಳಿಗೆಯ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸುಧಾರಣೆಗಳು ದೇಶಕ್ಕೆ ಸಿಗಲಿರುವ ದೀಪಾವಳಿಯ ಕೊಡುಗೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
“ಈ ಬಾರಿಯ ದೀಪಾವಳಿಯನ್ನು ನಾನು ನಿಮಗಾಗಿ ‘ಡಬಲ್ ದೀಪಾವಳಿ’ಯನ್ನಾಗಿಸುತ್ತೇನೆ. ಈ ಹಬ್ಬದ ಸಂದರ್ಭದಲ್ಲಿ ನಾಗರಿಕರಿಗೆ ಒಂದು ದೊಡ್ಡ ಉಡುಗೊರೆ ಸಿಗಲಿದೆ. ನಾವು ಮುಂದಿನ ಪೀಳಿಗೆಯ ಜಿಎಸ್ಟಿ ಸುಧಾರಣೆಗಳನ್ನು ಜಾರಿಗೆ ತರುತ್ತಿದ್ದೇವೆ. ಇದು ದೇಶದಾದ್ಯಂತ ತೆರಿಗೆ ಹೊರೆಯನ್ನು ಕಡಿಮೆ ಮಾಡಲಿದೆ. ಇದು ದೀಪಾವಳಿಗಿಂತ ಮುಂಚಿತವಾಗಿ ನೀಡುತ್ತಿರುವ ಕೊಡುಗೆಯಾಗಿದೆ,” ಎಂದು ಪ್ರಧಾನಿ ತಮ್ಮ ಭಾಷಣದಲ್ಲಿ ಘೋಷಿಸಿದ್ದಾರೆ. ಈ ಮೂಲಕ ಜಿಎಸ್ಟಿ ಸ್ಲ್ಯಾಬ್ ನಲ್ಲಿ ಬದಲಾವಣೆ ತರುವ ಮೂಲಕ ತೆರಿಗೆ ಹೊರೆ ತಗ್ಗಿಸುವ ಪರೋಕ್ಷ ಸಂದೇಶ ರವಾನಿಸಿದ್ದಾರೆ.
ಎಂಟು ವರ್ಷಗಳ ಹಿಂದೆ ಜಾರಿಗೆ ತಂದ ಜಿಎಸ್ಟಿ ವ್ಯವಸ್ಥೆಯ ಬಗ್ಗೆ ಭಾಷಣದಲ್ಲಿ ಉಲ್ಲೇಖಿಸಿದ ಪ್ರಧಾನಿ ಮೋದಿ, ಆಗಿನ ಪ್ರಮುಖ ಸುಧಾರಣೆಗಳು ದೇಶದಾದ್ಯಂತ ತೆರಿಗೆ ಹೊರೆಯನ್ನು ಕಡಿಮೆ ಮಾಡಿ, ತೆರಿಗೆ ಪ್ರಕ್ರಿಯೆಯನ್ನು ಸರಳಗೊಳಿಸಿತ್ತು. ಜುಲೈ 1, 2017 ರಂದು ಜಾರಿಗೆ ಬಂದಿದ್ದ ಈ ಪರೋಕ್ಷ ತೆರಿಗೆ ಪದ್ಧತಿಗೆ ಈಗ 8 ವರ್ಷಗಳು ಪೂರ್ಣಗೊಂಡಿದ್ದು, ಬದಲಾವಣೆಗಳನ್ನು ಪರಿಶೀಲಿಸುವ ಸಮಯ ಬಂದಿದೆ ಎಂದು ಹೇಳಿದರು. ಈ ಪರಿಶೀಲನೆಗಾಗಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದ್ದು, ರಾಜ್ಯಗಳೊಂದಿಗೂ ಸಮಾಲೋಚನೆ ನಡೆಸಿದ ನಂತರ ಸರ್ಕಾರವು ಹೊಸ ಜಿಎಸ್ಟಿ ಸುಧಾರಣೆಗಳನ್ನು ಸಿದ್ಧಪಡಿಸಿದೆ ಎಂದರು.
“ಈ ಹೊಸ ಸುಧಾರಣೆಗಳು ಜನಸಾಮಾನ್ಯರು ಬಳಸುವ ವಸ್ತುಗಳ ಮೇಲಿನ ತೆರಿಗೆಯನ್ನು ಗಣನೀಯವಾಗಿ ಕಡಿಮೆ ಮಾಡಲಿದೆ. ನಮ್ಮ ಎಂಎಸ್ಎಂಇಗಳು (MSME) ಇದರಿಂದ ದೊಡ್ಡ ಲಾಭವನ್ನು ಪಡೆಯಲಿವೆ. ದೈನಂದಿನ ಬಳಕೆಯ ವಸ್ತುಗಳು ಅಗ್ಗವಾಗುವುದರಿಂದ ನಮ್ಮ ಆರ್ಥಿಕತೆಯೂ ಬಲಗೊಳ್ಳಲಿದೆ,” ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ, ತ್ವರಿತ ಡಿಜಿಟಲ್ ಪಾವತಿಗಳಿಗಾಗಿ ದೇಶದಲ್ಲಿ ಬಳಸಲಾಗುತ್ತಿರುವ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ವೇದಿಕೆಯನ್ನು ಪ್ರಧಾನಿ ಮೋದಿ ಶ್ಲಾಘಿಸಿದರು. “ಇಂದು ಜಗತ್ತು ಯುಪಿಐ ವೇದಿಕೆಯನ್ನು ಒಂದು ಅದ್ಭುತವೆಂದು ನೋಡುತ್ತಿದೆ. ಯುಪಿಐ ಮೂಲಕವೇ ಇಂದು ನಾವು ಜಗತ್ತಿನ ಶೇ. 50ರಷ್ಟು ರಿಯಲ್-ಟೈಮ್ ವಹಿವಾಟುಗಳನ್ನು ಭಾರತದಲ್ಲಿಯೇ ನಡೆಸಲು ಶಕ್ತರಾಗಿದ್ದೇವೆ,” ಎಂದರು.


















