ನವದೆಹಲಿ: ಪಿಎಂ ಕಿಸಾನ್ ಯೋಜನೆಯನ್ನು ರೈತರಿಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಆದರೆ, ಹಲವು ರೈತರು ಈ ಯೋಜನೆಯನ್ನು ದುರುಪಯೋಗ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಅನರ್ಹ ಫಲಾನುಭವಿಗಳಾಗಿದ್ದ ವ್ಯಕ್ತಿಗಳಿಂದ 335 ಕೋಟಿ ರೂ ಹಣವನ್ನು ಹಿಂಪಡೆಯಲಾಗಿದೆ. ಈ ವಿಚಾರವನ್ನು ಸರ್ಕಾರವು ಸಂಸತ್ ಗೆ ತಿಳಿಸಿದೆ. ಪಿಎಂ ಕಿಸಾನ್ ಯೋಜನೆಯಲ್ಲಿ ಅರ್ಹ ಫಲಾನುಭವಿಗಳನ್ನು ಖಾತ್ತಿಪಡಿಸುವ ಹೊಣೆ ರಾಜ್ಯ ಸರ್ಕಾರಗಳಿಗೆ ಇರುತ್ತದೆ. ಕೆಲ ರಾಜ್ಯಗಳಲ್ಲಿ ಫಲಾನುಭವಿಗಳ ಆಧಾರ್ ಅನ್ನು ಲಿಂಕ್ ಮಾಡುವ ನಿಯಮದಿಂದ ವಿನಾಯಿತಿ ನೀಡಲಾಗಿತ್ತು. ಇದೀಗ ಕೆವೈಸಿ ಮೂಲಕ ಆಧಾರ್ ಅನ್ನು ಲಿಂಕ್ ಮಾಡುವುದನ್ನು ಕಡ್ಡಾಯ ಮಾಡಲಾಗಿದೆ. ಹೀಗಾಗಿ ಅನರ್ಹ ಫಲಾನುಭವಿಗಳನ್ನು ಗುರುತಿಸಲು ಸಾಧ್ಯವಾಗಿದೆ. ಇವರಿಂದ 335 ಕೋಟಿ ರೂ ಹಣ ಹಿಂಪಡೆಯಲು ಸಾಧ್ಯವಾಗಿದೆ ಎಂದು ಸರ್ಕಾರ ಹೇಳಿದೆ.
ಕೇಂದ್ರ ಸರ್ಕಾರ ಒಂದು ವರ್ಷದಲ್ಲಿ ತಲಾ 2 ಸಾವಿರ ರೂ.ನಂತೆ ಮೂರು ಕಂತುಗಳಲ್ಲಿ ಫಲಾನುಭವಿ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ವರ್ಗಾಯಿಸುತ್ತದೆ. ಕೃಷಿ ಕಾರ್ಯಕ್ಕೆ ಸರ್ಕಾರ ನೀಡುವ ಸಹಾಯಧನ ಇದಾಗಿದೆ.