ಬೆಂಗಳೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಕರ್ನಾಟಕ ಸೇರಿ ದೇಶ 9.8 ಕೋಟಿ ರೈತರ ಖಾತೆಗಳಿಗೆ ತಲಾ 2 ಸಾವಿರ ರೂ. ಜಮೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರೇ 19ನೇ ಕಂತಿನ ಹಣವನ್ನು ಜಮೆ ಮಾಡುವ ಪ್ರಕ್ರಿಯೆಗೆ ಬಿಹಾರದಲ್ಲಿ ಚಾಲನೆ ನೀಡಿದ್ದಾರೆ. ಇನ್ನು, ಸಣ್ಣ ರೈತರಾಗಿದ್ದರೂ ಖಾತೆಗೆ ಹಣ ಜಮೆಯಾಗಿಲ್ಲ ಎಂದರೆ, ರೈತರು ಒಂದಷ್ಟು ಪ್ರಕ್ರಿಯೆಗಳನ್ನು ಅನುಸರಿಸಬೇಕು.
ಇ-ಕೆವೈಸಿ ಮಾಡಿಸಿ
ಪಿಎಂ ಕಿಸಾನ್ ಯೋಜನೆಯ ಲಾಭ ಪಡೆಯಲು ರೈತರು ಇ-ಕೆವೈಸಿ ಮಾಡಿಸುವುದು ಪ್ರಮುಖವಾಗಿದೆ. ಇ-ಕೆವೈಸಿ ಮಾಡಿಸದವರಿಗೆ ಹಣ ಜಮೆ ಆಗುವುದಿಲ್ಲ. ಹಾಗಾಗಿ, ರೈತರು ಯೋಜನೆಯ pmkisan.gov.in ಪೋರ್ಟಲ್ ಗೆ ಭೇಟಿ ನೀಡಿ, ಅಗತ್ಯ ದಾಖಲೆ ಒದಗಿಸಿ ಇ-ಕೆವೈಸಿ ಮಾಡಬಹುದಾಗಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಇರದವರು ಇಂಟರ್ ನೆಟ್ ಕೆಫೆಗಳಿಗೆ ತೆರಳಿ ಇ-ಕೆವೈಸಿ ಮಾಡಿಸಿಕೊಳ್ಳಬಹುದಾಗಿದೆ. ಸಾಮಾನ್ಯ ಸೇವಾ ಕೇಂದ್ರಗಳಲ್ಲೂ ಇ-ಕೆವೈಸಿ ಮಾಡಿಸಬಹುದಾಗಿದೆ.
ಆಧಾರ್ ಲಿಂಕ್ ಮಾಡಿಸಿ
ಹೆಚ್ಚಿನ ರೈತರು ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಮಾಡಿಸಿರುವುದಿಲ್ಲ. ಆಧಾರ್ ಲಿಂಕ್ ಮಾಡದಿದ್ದರೆ ಕಿಸಾನ್ ಸಮ್ಮಾನ್ ನಿಧಿಯ ಹಣ ಜಮೆಯಾಗುವುದಿಲ್ಲ. ಹಾಗಾಗಿ, ರೈತರು ಕೂಡಲೇ ತಮ್ಮ ಬ್ಯಾಂಕ್ ಖಾತೆ ಇರುವ ಬ್ರ್ಯಾಂಚ್ ಗಳಿಗೆ ತೆರಳಿ ಖಾತೆಗೆ ಆಧಾರ್ ಲಿಂಕ್ ಮಾಡಿಸಬೇಕು. ಇದಾದ ಬಳಿಕವೇ ನಿಮ್ಮ ಖಾತೆಗೆ ಹಣ ಜಮೆಯಾಗುತ್ತದೆ.
ಕೇಂದ್ರ ಸರ್ಕಾರವು ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ರೈತರ ಖಾತೆಗಳಿಗೆ ನೇರವಾಗಿ ಹಣ ವರ್ಗಾವಣೆ ಮಾಡುತ್ತದೆ. ಹಾಗಾಗಿ ರೈತರು ಬ್ಯಾಂಕ್ ಗಳಿಗೆ ತೆರಳಿ, ತಮ್ಮ ಖಾತೆಯಲ್ಲಿ ಡಿಬಿಟಿ ಆ್ಯಕ್ವಿವೇಟ್ ಆಗಿರುವುದನ್ನು ದೃಢಪಡಿಸಿಕೊಳ್ಳಬೇಕು. ಇದೆಲ್ಲ ಪ್ರಕ್ರಿಯೆ ಮುಗಿದ ಬಳಿಕ ಮುಂದಿನ ಕಂತಿನಲ್ಲಿ ಹಣ ಬಿಡುಗಡೆಯಾಗಲಿದೆ.