ಬೆಂಗಳೂರು: ಪಿಎಂ ಕಿಸಾನ್ ಯೋಜನೆ ಅನ್ವಯ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ 9 ಕೋಟಿ ರೈತರ ಖಾತೆಗಳಿಗೆ ತಲಾ 2 ಸಾವಿರ ರೂ. ಜಮೆ ಮಾಡಿದ್ದಾರೆ. ಒಟ್ಟು 18 ಸಾವಿರ ಕೋಟಿ ರೂಪಾಯಿಯನ್ನು ಮೋದಿ ಅವರು ಜಮೆ ಮಾಡಿದ್ದಾರೆ. ಆದರೆ, ಮಹತ್ವದ ಬೆಳವಣಿಗೆಯೊಂದರಲ್ಲಿ ಈ ಬಾರಿ ಸುಮಾರು 70 ಲಕ್ಷ ರೈತರನ್ನು ಪಿಎಂ ಕಿಸಾನ್ ಯೋಜನೆಯಿಂದ ಕೈಬಿಡಲಾಗಿದೆ. ಹಾಗಾಗಿ, ರೈತರು ನಿಮ್ಮ ಖಾತೆಗೆ ಹಣ ಬಂದಿದೆಯೇ? ನೀವು ಯೋಜನೆಯಲ್ಲಿ ಇನ್ನೂ ಇದ್ದೀರಾ ಎಂಬುದನ್ನು ಪರಿಶೀಲನೆ ಮಾಡಿಕೊಳ್ಳಬೇಕಿದೆ.
ಚೆಕ್ ಮಾಡುವುದು ಹೇಗೆ?
ಪಿಎಂ ಕಿಸಾನ್ ಯೋಜನೆಯ ಸ್ಟೇಟಸ್ ತಿಳಿಯಲು pmkisan.gov.in ವೆಬ್ ಸೈಟ್ ಗೆ ಭೇಟಿ ನೀಡಬೇಕು. ಹೋಮ್ ಪೇಜ್ ನಲ್ಲಿ ‘Know Your Status’ ಮೇಲೆ ಕ್ಲಿಕ್ ಮಾಡಬೇಕು. ಆಧಾರ್ ಸಂಖ್ಯೆ, ಪಿಎಂ-ಕಿಸಾನ್ ಐಡಿ ಅಥವಾ ನೋಂದಾಯಿತ ಮೊಬೈಲ್ ನಂಬರ್ ನಮೂದಿಸಬೇಕು. ಕ್ಯಾಪ್ಚಾ ನಮೂದಿಸಿ ‘Get Status’ ಕ್ಲಿಕ್ ಮಾಡಬೇಕು. ಇದಾದ ಬಳಿಕ 21ನೇ ಕಂತಿನ ಹಣ ಕಂತು ಜಮಾ ಆಗಿದ್ಯಾ? ಜಮಾ ದಿನಾಂಕ ಮತ್ತು ಫಲಾನುಭವಿ ಸ್ಥಿತಿಯನ್ನು ನೀವು ಪರಿಶೀಲಿಸಬಹುದು.
70 ಲಕ್ಷ ರೈತರಿಗೆ ಕೊಕ್
2024-25ನೇ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರವು 10.6 ಕೋಟಿ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ 2 ಸಾವಿರ ರೂ. ಜಮೆ ಮಾಡಿತ್ತು. ಆದರೆ, ಈ ಬಾರಿ ಯೋಜನೆಗೆ ಅನರ್ಹರಾಗಿರುವ 70 ಲಕ್ಷ ರೈತರನ್ನು ಕೈಬಿಡಲಾಗಿದೆ. ಅಂದರೆ, 21ನೇ ಕಂತಿನ ಹಣವನ್ನು 9.7 ಕೋಟಿ ರೈತರ ಖಾತೆಗಳಿಗೆ ಜಮೆ ಮಾಡಲಾಗಿದೆ.
ಪಿಎಂ ಕಿಸಾನ್ ಯೋಜನೆಯು ಸಣ್ಣ ರೈತರಿಗೆ ಅನುಕೂಲವಾಗಲಿ ಎಂದು ಜಾರಿಗೆ ತರಲಾಗಿದೆ. ಹಾಗಾಗಿ, ಹೆಚ್ಚಿನ ಜಮೀನು ಹೊಂದಿರುವವರು, ಆದಾಯ ಹೊಂದಿರುವವರು, ಆದಾಯ ತೆರಿಗೆ ಪಾವತಿಸುವ ರೈತರು, ಸರ್ಕಾರಿ ಉದ್ಯೋಗಿಗಳು ಹಾಗೂ ತಿಂಗಳಿಗೆ 10 ಸಾವಿರ ರೂ.ಗಿಂತ ಹೆಚ್ಚಿನ ಪಿಂಚಣಿ ಪಡೆಯುವ ರೈತರನ್ನು ಯೋಜನೆಯಿಂದ ಕೈಬಿಡಲಾಗಿದೆ.
ಇದನ್ನೂ ಓದಿ: ಅಮ್ಮಾ, ಕೊನೇ ಬಾರಿ ನೋವು ಕೊಡುತ್ತಿದ್ದೇನೆ: ಶಿಕ್ಷಕರ ವಿರುದ್ಧ ಡೆತ್‌ನೋಟ್ ಬರೆದು ಮೆಟ್ರೋ ಹಳಿಗೆ ಹಾರಿ ಬಾಲಕ ಆತ್ಮಹತ್ಯೆ



















