ಬೆಂಗಳೂರು: ಕೇಂದ್ರ ಸರ್ಕಾರವು ದೀಪಾವಳಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಈಗಾಗಲೇ ಬೋನಸ್ ಹಾಗೂ ತುಟ್ಟಿ ಭತ್ಯೆ ಹೆಚ್ಚಳದ ಮೂಲಕ ಸಿಹಿ ಸುದ್ದಿ ನೀಡಿದೆ. ಇದರ ಬೆನ್ನಲ್ಲೇ, ದೇಶದ ಸುಮಾರು 10 ಕೋಟಿ ರೈತರಿಗೆ ಕೂಡ ದೀಪಾವಳಿಗೆ ಮೊದಲೇ ಗುಡ್ ನ್ಯೂಸ್ ನೀಡುವ ಸಾಧ್ಯತೆ ಇದೆ. ಹೌದು, ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಅನ್ವಯ ದೇಶದ 9.7 ಕೋಟಿ ರೈತರಿಗೆ 21ನೇ ಕಂತಿನ ಹಣವಾದ 2 ಸಾವಿರ ರೂಪಾಯಿಯನ್ನು ರೈತರ ಖಾತೆಗಳಿಗೆ ಜಮೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
ಈಗಾಗಲೇ ಜಮ್ಮು-ಕಾಶ್ಮೀರದ 8.5 ಲಕ್ಷ ರೈತರಿಗೆ 21ನೇ ಕಂತಿನ ಹಣವನ್ನು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಬಿಡುಗಡೆ ಮಾಡಿದ್ದಾರೆ. ಪ್ರವಾಹ, ನೆರೆ, ಭೂಕುಸಿತದಿಂದ ಜಮ್ಮು-ಕಾಶ್ಮೀರವು ತತ್ತರಿಸಿರುವ ಕಾರಣ ಶೀಘ್ರವೇ ಆ ರೈತರಿಗೆ ಹಣಕಾಸು ನೆರವು ನೀಡಲಾಗಿದೆ. ಕರ್ನಾಟಕ ಸೇರಿ ಉಳಿದ ರಾಜ್ಯಗಳ ರೈತರಿಗೆ ಶೀಘ್ರದಲ್ಲೇ ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಅಷ್ಟೇ ಅಲ್ಲ, ಪಿಎಂ ಕಿಸಾನ್ ಯೋಜನೆಯ ಲಾಭ ಪಡೆಯಲು ರೈರು ಕೆವೈಸಿ ಪೂರ್ಣಗೊಳಿಸುವುದು ಪ್ರಮುಖ ಸಂಗತಿಯಾಗಿದೆ. ನೀವು ಕೂಡ ಪಿಎಂ ಕಿಸಾನ್ ನಿಧಿಯ ಫಲಾನುಭವಿಗಳಾಗಿದ್ದರೆ ಮತ್ತು 21ನೇ ಕಂತಿಗಾಗಿ ಕಾಯುತ್ತಿದ್ದರೆ, ನೀವು ಕೆವೈಸಿ (KYC) ಮಾಡಿಸುವುದು ಬಹಳ ಮುಖ್ಯ. ನೀವು ಇನ್ನೂ ಕೆವೈಸಿ ಮಾಡಿಸದಿದ್ದರೆ, ನಿಮ್ಮ ಹಣ ಖಾತೆಗೆ ಜಮೆಯಾಗದೆ ಸಿಲುಕಿಕೊಳ್ಳಬಹುದು. ಹಾಗಾಗಿ, ಕೂಡಲೇ ಕೆವೈಸಿ ಮಾಡಿಸಿ. ಹೇಗೆ ಮಾಡುವುದು ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ಕೆವೈಸಿ ಪೂರ್ಣಗೊಳಿಸುವುದು ಹೇಗೆ?
- ಅಧಿಕೃತ ಪಿಎಂ ಕಿಸಾನ್ ಪೋರ್ಟಲ್ ಆಗಿರುವ pmkisan.gov.in ಗೆ ಭೇಟಿ ನೀಡಿ
- ‘ಫಾರ್ಮರ್ಸ್ ಕಾರ್ನರ್’ವಿಭಾಗದ ಅಡಿಯಲ್ಲಿ, ‘ಹೊಸ ರೈತ ನೋಂದಣಿ’ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಆಧಾರ್ ಸಂಖ್ಯೆ, ರಾಜ್ಯ ಮತ್ತು ಬ್ಯಾಂಕ್ ವಿವರಗಳನ್ನು ನಮೂದಿಸಿ.
- ಅಗತ್ಯ ದಾಖಲೆಗಳನ್ನು ಅಪ್ ಲೋಡ್ ಮಾಡಿ.
-‘ಸಲ್ಲಿಸು’ ಆಪ್ಶನ್ ಮೇಲೆ ಕ್ಲಿಕ್ ಮಾಡಿ. ಪರಿಶೀಲಿಸಿದ ನಂತರ, ನೀವು ನಿಮ್ಮ ಕಂತುಗಳನ್ನು ಸ್ವೀಕರಿಸಲು ಪ್ರಾರಂಭಿಸುತ್ತೀರಿ.