ಬೈಂದೂರು : ತ್ರಾಸಿ ಗ್ರಾಮ ಪಂಚಾಯತ್ ನ ಹೊಸಪೇಟೆಯಲ್ಲಿ ಸ್ನೇಹ ಸಂಘ (ರಿ)ದ ನೇತೃತ್ವದಲ್ಲಿ 30ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವನ್ನು ಪ್ಲಾಸ್ಟಿಕ್ ಮುಕ್ತ ಗಣೇಶೋತ್ಸವವಾಗಿ ಆಚರಿಸಲು ಸಾಹಸ್ ಎನ್.ಜಿ.ಒ ಅವರ ಸ್ವಚ್ಛ ಕರಾವಳಿ ಮಿಷನ್ ಯೋಜನೆ ಹಾಗೂ ಶಓಮಿ ಟೆಕ್ನಾಲಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಅವರ ಸಿಎಸ್ ಆರ್ ಬೆಂಬಲದೊಂದಿಗೆ ನಡೆಸಲಾಯಿತು.
ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲು ವಿಶೇಷ ಗಣೇಶೋತ್ಸವ ಮೆರವಣಿಗೆಯಲ್ಲಿ ಸಂಸ್ಥೆಯ ಸಿಬ್ಬಂದಿಗಳು ವಿವಿಧ ವೇಷ ಭೂಷಣಗಳೊಂದಿಗೆ ಟ್ಯಾಬ್ಲೋ (ಸ್ತಬ್ಧಚಿತ್ರ) ಮೂಲಕ ಅರಿವು ಮೂಡಿಸಿದರು.
ಪ್ರಾಜೆಕ್ಟ್ ಕೋ ಆರ್ಡಿನೇಟರ್ ಭವಿತ್ ಆಚಾರ್ಯ ಮಾತನಾಡಿ, ಸಮುದ್ರರಾಜನ ವೇಷ ಧರಿಸಿ ಪ್ಲಾಸ್ಟಿಕ್ ಮತ್ತು ಘನತ್ಯಾಜ್ಯ ವಸ್ತುಗಳು ಸಮುದ್ರಕ್ಕೆ ಹಾಕಬಾರದು ಮತ್ತು ಸಮುದ್ರ ತೀರವನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳಬೇಕು. ಪರಿಸರವನ್ನು ರಕ್ಷಿಸಲು, ಕಸವನ್ನು ತೆಗೆದುಹಾಕಲು ಮತ್ತು ಜಾಗೃತಿ ಮೂಡಿಸಲು, ಸಮುದ್ರ ಜೀವನಾಡಿಗಳನ್ನು ಸಂರಕ್ಷಿಸಲು ಈ ಸಂಸ್ಥೆಗಳ ಅರಿಯು ಮೂಡಿಸುವ ಸಣ್ಣ ಪ್ರಯತ್ನ ಎಂದರು.
ತ್ರಾಸಿ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಮಿಥುನ್ ದೇವಾಡಿಗ ಮಾತನಾಡಿ, ಈ ವರ್ಷ ಗಣೇಶ ಹಬ್ಬವನ್ನು ಪ್ಲಾಸ್ಟಿಕ್ ಮುಕ್ತ ಹಬ್ಬವನ್ನು ಆಚರಿಸಿದ್ದೇವೆ. ಪೂಜೆ ಹಣ್ಣು-ಕಾಯಿಗೆ ಬಟ್ಟೆ ಕೈ ಚೀಲ ಹಾಗೂ ಊಟ ಉಪಹಾರದಲ್ಲಿ ಸ್ಟೀಲ್ ಲೋಟ -ಪ್ಲೇಟ್ ಬಳಸಿ ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ಗಣೇಶೋತ್ಸವವನ್ನು ಯಶಸ್ವಿಯಾಗಿ ನೆರವೇರಿಸಲಾಯಿತು. ಸಾಹಸ್ SKM ತಂಡದವರಿಂದ ಮನೆಗಳಿಗೆ ಮಾಹಿತಿ ನೀಡಿದ ಪ್ರಯುಕ್ತ ಎಲ್ಲಾ ಮನೆಯವರು ಹಣ್ಣು ಕಾಯಿಯನ್ನು ಕೈ ಚೀಲದಲ್ಲಿ ತರುವಲ್ಲಿ ಸಹಕಾರಿಯಾಗಿದೆ. ಉತ್ಪತ್ತಿಯಾದ ಊಟದ ಹಸಿ ತ್ಯಾಜ್ಯವನ್ನು ದನಗಳಿಗೆ ನೀಡಿ ವಿಲೇವಾರಿಗೊಳಿಸಲಾಯಿತು. ಸಾರ್ವಜನಿಕರಿಗೆ ತ್ಯಾಜ್ಯದ ಅರಿವು ಮೂಡಿಸಲು ಸ್ಟಾಲ್ ಅಳವಡಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೊಳೆ, ಸ್ನೇಹ ಸಂಘ (ರಿ) ಹೊಸಪೇಟೆ, ತ್ರಾಸಿ ಗ್ರಾಮ ಪಂಚಾಯಿತ್ ನ ಸಂಜೀವಿನಿ ತಂಡದವರು, ಸಾಹಸ್ ತಂಡದ ಪ್ರತಿನಿಧಿಗಳು,ಊರ ನಾಗರಿಕರು ಉಪಸ್ಥಿತರಿದ್ದರು.























