ನವದೆಹಲಿ: ಮುಂದಿನ ದಿನಗಳಲ್ಲಿ ಮಂಗಳ ಗ್ರಹವನ್ನೂ ಮಾನವ ವಾಸಯೋಗ್ಯವಾಗುವಂತೆ ಮಾಡಲು ಬೇರೆ ಬೇರೆ ರೀತಿಯ ಅಧ್ಯಯನಗಳು, ಪ್ರಯೋಗಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಎಂಬಂತೆ, ಮದ್ರಾಸ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಯ ತಂಡವೊಂದು ಅನ್ಯಗ್ರಹಗಳಲ್ಲಿ ಬದುಕು ಸಾಗಿಸಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಹಲವು ಸಂಶೋಧನೆ ಕೈಗೊಳ್ಳುತ್ತಿದ್ದು, ಇಂಥ ಸಂಶೋಧನೆ ಮತ್ತು ತಂತ್ರಜ್ಞಾನದಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ.
ಬಾಹ್ಯಾಕಾಶದಲ್ಲಿ ವಸಾಹತು ಸ್ಥಾಪನೆಯ ಸವಾಲುಗಳನ್ನು ಎದುರಿಸಲು ನವೀನ ಪರಿಹಾರಗಳನ್ನು ಕಂಡುಕೊಳ್ಳುವತ್ತ ಐಐಟಿ ಮದ್ರಾಸ್‌ನ ದಿ ಎಕ್ಸ್‌ಟ್ರಾ ಟೆರೆಸ್ಟ್ರಿಯಲ್ ಮ್ಯಾನುಫ್ಯಾಕ್ಚರಿಂಗ್(ExTeM) ಗಮನ ಕೇಂದ್ರೀಕರಿಸಿದೆ.
ಜಗತ್ತಿನ ಪ್ರಮುಖ ಬಾಹ್ಯಾಕಾಶ ಸಂಸ್ಥೆಗಳೆಲ್ಲವೂ ಮಂಗಳದಂತಹ ಗ್ರಹಗಳಿಗೆ ಭಾರೀ ಪೇಲೋಡ್‌ಗಳನ್ನು ಸಾಗಿಸುವತ್ತ ಗಮನ ಹರಿಸಿದರೆ, ಎಕ್ಸ್‌ಟೆಮ್ ತಂಡವು ಒಂದು ಬಾರಿ ಗಗನಯಾತ್ರಿಗಳು ಇಂಥ ಗ್ರಹಕ್ಕೆ ಆಗಮಿಸಿದ ನಂತರ, ಅವರು ತಮ್ಮ ಹೊಸ ಪರಿಸರಕ್ಕೆ ಹೇಗೆ ಹೊಂದಿಕೊಳ್ಳಬಹುದು ಎಂಬುದನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಅಧ್ಯಯನ ಕೈಗೊಳ್ಳುತ್ತಿದೆ.
ಕೆಂಪು ಗ್ರಹ ಅಂದರೆ ಮಂಗಳ ಗ್ರಹದಲ್ಲಿ ನೀರಿನ ಅಭಾವವಿರುವ ಕಾರಣ, ನೀರನ್ನೇ ಬಳಸದೇ ಅಲ್ಲಿ ಮನೆ ನಿರ್ಮಿಸುವುದು ಹೇಗೆ? ಈ ಪ್ರಶ್ನೆಗೆ ಉತ್ತರ ಹುಡುಕುವ ಕೆಲಸವನ್ನು ಐಐಟಿ ಮದ್ರಾಸ್‌ನ ಈ ತಂಡ ಮಾಡುತ್ತಿದೆ. ನೀರನ್ನು ಉಪಯೋಗಿಸದೇ ಕಾಂಕ್ರೀಟ್ ತಯಾರಿಸುವ ವಿನೂತನ ಪ್ರಾಜೆಕ್ಟ್ ಅನ್ನು ಎಕ್ಸ್‌ಟೆಮ್ ತಂಡ ಕೈಗೆತ್ತಿಕೊಂಡಿದೆ.
“ಭೂಮಿಯ ಮಾನದಂಡಗಳಿಗೆ ಹೊಂದಿಕೆಯಾಗುವಂಥ ಕಾಂಕ್ರೀಟ್ ಅನ್ನು ನಾವು ಅಭಿವೃದ್ಧಿಪಡಿಸುತ್ತಿದ್ದೇವೆ. ಅದಕ್ಕಾಗಿ ನಾವು ಮಂಗಳ ಗ್ರಹದಲ್ಲಿ ಹೇರಳವಾಗಿ ಲಭ್ಯವಿರುವ ಗಂಧಕದೊಂದಿಗೆ ಬೆರೆಸಿದ ಸಂಯುಕ್ತವನ್ನು ಬಳಸಿದ್ದೇವೆ” ಎಂದು ಎಕ್ಸ್‌ಟೆಮ್ ಸಂಶೋಧಕ ಆದಿತ್ಯ ಪ್ಲೇಟೋ ಸಿದ್ಧಾರ್ಥ್ ಹೇಳಿದ್ದಾರೆ.
ಇದಲ್ಲದೇ, ಶೂನ್ಯ ಗುರುತ್ವಾಕರ್ಷಣೆಯಲ್ಲಿ ವಸ್ತುಗಳ ಗುಣವಿಶೇಷಗಳನ್ನು ಅಧ್ಯಯನ ಮಾಡಲೆಂದೇ ಈ ತಂಡವು ವಿಶ್ವದ ನಾಲ್ಕನೇ ಅತಿದೊಡ್ಡ ಮೈಕ್ರೋಗ್ರಾವಿಟಿ ಡ್ರಾಪ್ ಟವರ್ ಅನ್ನು ನಿರ್ಮಿಸಿದೆ. ಇದು ಮೈಕ್ರೋಗ್ರಾವಿಟಿಯಲ್ಲಿ ಲೋಹದ ನೊರೆಗಳನ್ನು ಹೇಗೆ ಉತ್ಪಾದಿಸಬಹುದು ಎಂಬುದನ್ನು ಅನ್ವೇಷಿಸಲು ಸಂಶೋಧಕರಿಗೆ ಅನುವು ಮಾಡಿಕೊಡುತ್ತದೆ. ಉಲ್ಕಾಶಿಲೆಯ ಪರಿಣಾಮಗಳಿಂದ ಮಂಗಳ ಗ್ರಹದ ಮೇಲಿನ ರಚನೆ(ಮನೆಯಂಥ ಕಟ್ಟಡಗಳಿಗೆ)ಗಳಿಗೆ ಸಂಭಾವ್ಯ ರಕ್ಷಣೆಯನ್ನು ಇದು ನೀಡುತ್ತದೆ.
ನಿರ್ಮಾಣ ಸಾಮಗ್ರಿಗಳ ಅಧ್ಯಯನಕ್ಕೇ ಎಕ್ಸ್‌ಟೆಮ್ ತಂಡದ ಸಂಶೋಧನೆ ಸೀಮಿತವಾಗಿಲ್ಲ. ಇದರ ಜೊತೆಗೆ, ಶೂನ್ಯ ಗುರುತ್ವಾಕರ್ಷಣೆಯಲ್ಲಿ ವೆಲ್ಡಿಂಗ್ ಮಾಡಲು ಅಗತ್ಯವಿರು ನವೀನ ತಂತ್ರಗಳನ್ನು ಮತ್ತು 3 ಡಿ ಮುದ್ರಣ ಮತ್ತು ಬಯೋಪ್ರಿಂಟಿಂಗ್‌ನ ಸುಧಾರಣೆಯಂಥ ಸಂಶೋಧನೆಯನ್ನೂ ಈ ತಂಡ ನಡೆಸುತ್ತಿದೆ.
ಮುಂದಿನ ತಲೆಮಾರಿನ ಆಪ್ಟಿಕಲ್ ಫೈಬರ್ ಗಳ ಅಭಿವೃದ್ಧಿ, ಹೃದಯಗಳಂತಹ ನಿರ್ಣಾಯಕ ಅಂಗಗಳ ಜೈವಿಕ ಉತ್ಪಾದನೆಯ ಕುರಿತ ಸಂಶೋಧನೆಯನ್ನು ನಡೆಸುವ ಉದ್ದೇಶವನ್ನೂ ಈ ತಂಡ ಹಾಕಿಕೊಂಡಿದೆ.
ಈ ಸಂಶೋಧನೆಯು ಬಾಹ್ಯಾಕಾಶಕ್ಕೆ ಸಂಬಂಧಿಸಿ ಮಾತ್ರವಲ್ಲದೆ ಭೂಮಿಯ ಮೇಲೂ ಅದರ ಸಂಭಾವ್ಯ ಅಳವಡಿಕೆಯ ಉದ್ದೇಶವನ್ನೂ ಹೊಂದಿದೆ. “ಬಾಹ್ಯಾಕಾಶದಲ್ಲಿ ಭೂಮಿ ಆಧಾರಿತ ವಸ್ತುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ಬಾಹ್ಯಾಕಾಶದಲ್ಲೇ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಗುರಿ ನಮ್ಮದಾಗಿದೆ” ಎಂದು ಎಕ್ಸ್‌ಟೆಮ್ ಉಪಕ್ರಮದ ನೇತೃತ್ವ ವಹಿಸಿರುವ ಪ್ರೊಫೆಸರ್ ಸತ್ಯನ್ ಸುಬ್ಬಯ್ಯ ಹೇಳಿದ್ದಾರೆ.