ಮುಂಬೈ: ಭಾರತೀಯ ಜಾಹೀರಾತು ಕ್ಷೇತ್ರದ ದಂತಕಥೆ, ಫೆವಿಕಾಲ್, ಕ್ಯಾಡ್ಬರಿ ಮತ್ತು ಏಷ್ಯನ್ ಪೇಂಟ್ಸ್‌ನಂತಹ ಅಪ್ರತಿಮ ಜಾಹೀರಾತುಗಳ ಸೃಷ್ಟಿಕರ್ತ ಪಿಯೂಷ್ ಪಾಂಡೆ (70) ಶುಕ್ರವಾರ ನಿಧನರಾಗಿದ್ದಾರೆ. ಸೋಂಕಿನಿಂದ ಬಳಲುತ್ತಿದ್ದ ಅವರು ಮುಂಬೈನಲ್ಲಿ ಕೊನೆಯುಸಿರೆಳೆದಿದ್ದು, ಅವರ ಅಂತ್ಯಕ್ರಿಯೆಯನ್ನು ಶನಿವಾರ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಜಾಹೀರಾತು ಲೋಕದ ಧ್ರುವತಾರೆ
ಸುಮಾರು ನಾಲ್ಕು ದಶಕಗಳ ಕಾಲ ಜಾಹೀರಾತು ಉದ್ಯಮದಲ್ಲಿದ್ದ ಪಾಂಡೆ, ‘ಓಗಿಲ್ವಿ’ ಸಂಸ್ಥೆಯ ಜಾಗತಿಕ ಮುಖ್ಯ ಸೃಜನಾತ್ಮಕ ಅಧಿಕಾರಿ ಮತ್ತು ಭಾರತದ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. 1982ರಲ್ಲಿ ಓಗಿಲ್ವಿ ಸಂಸ್ಥೆ ಸೇರಿದ ಅವರು, ಸನ್‌ಲೈಟ್ ಡಿಟರ್ಜೆಂಟ್‌ಗಾಗಿ ತಮ್ಮ ಮೊದಲ ಜಾಹೀರಾತನ್ನು ಬರೆದಿದ್ದರು. ನಂತರ ಸಂಸ್ಥೆಯ ಸೃಜನಾತ್ಮಕ ವಿಭಾಗದಲ್ಲಿ ಅದ್ಭುತವಾದ ಸಾಧನೆ ಮಾಡಿ, ಫೆವಿಕಾಲ್, ಕ್ಯಾಡ್ಬರಿ, ಏಷ್ಯನ್ ಪೇಂಟ್ಸ್, ಲೂನಾ ಮೊಪೆಡ್, ಫಾರ್ಚೂನ್ ಆಯಿಲ್ ಸೇರಿದಂತೆ ಹಲವಾರು ಬ್ರ್ಯಾಂಡ್‌ಗಳಿಗೆ ಸ್ಮರಣೀಯ ಜಾಹೀರಾತುಗಳನ್ನು ರಚಿಸಿದರು. ಅವರ ನಾಯಕತ್ವದಲ್ಲಿ, ‘ದಿ ಎಕನಾಮಿಕ್ ಟೈಮ್ಸ್’ ನಡೆಸಿದ ಸಮೀಕ್ಷೆಯಲ್ಲಿ ಓಗಿಲ್ವಿ ಇಂಡಿಯಾ ಸತತ 12 ವರ್ಷಗಳ ಕಾಲ ದೇಶದ ನಂಬರ್ 1 ಜಾಹೀರಾತು ಸಂಸ್ಥೆಯಾಗಿ ಸ್ಥಾನ ಪಡೆದಿತ್ತು.
ಕ್ಯಾಡ್ಬರಿಯ ‘ಕುಛ್ ಖಾಸ್ ಹೈ’, ಫೆವಿಕಾಲ್‌ನ ಹಾಸ್ಯಮಯ ಜಾಹೀರಾತುಗಳು, ಏಷ್ಯನ್ ಪೇಂಟ್ಸ್‌ನ ‘ಹರ್ ಖುಷಿ ಮೆ ರಂಗ್ ಲಾಯೇ’, ವೊಡಾಫೋನ್‌ನ ಜನಪ್ರಿಯ ಪಗ್(ವೆರೆವರ್ ಯೂ ಗೋ, ಯುವರ್ ನೆಟ್‌ವರ್ಕ್ ಫಾಲೋಸ್) ಮತ್ತು ಝೂಝೂ ಜಾಹೀರಾತುಗಳು, ಫೆವಿಕ್ವಿಕ್‌ನ ‘ತೋಡೋ ನಹೀಂ, ಜೋಡೋ’, ಪಾಂಡ್ಸ್‌ನ ‘ಗೂಗ್ಲಿ ವೂಗ್ಲಿ ವೂಷ್’ ಕೂಡ ಇವರ ಪರಿಕಲ್ಪನೆಯಿಂದ ಹುಟ್ಟಿದ ಜಾಹೀರಾತುಗಳಾಗಿದ್ದವು.

ರಾಜಕೀಯ, ಸಾಮಾಜಿಕ ಕ್ಷೇತ್ರಕ್ಕೂ ವಿಸ್ತರಿಸಿದ್ದ ಪ್ರತಿಭೆ
ಕೇವಲ ಕಾರ್ಪೊರೇಟ್ ಉತ್ಪನ್ನಗಳಿಗೆ ಮಾತ್ರವಲ್ಲದೆ, ರಾಜಕೀಯ ಮತ್ತು ಸಾಮಾಜಿಕ ಅಭಿಯಾನಗಳಿಗೂ ಪಿಯೂಷ್ ಪಾಂಡೆ ತಮ್ಮ ಸೃಜನಶೀಲತೆಯ ಸ್ಪರ್ಶ ನೀಡಿದ್ದರು. 2014ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಚಾರಕ್ಕಾಗಿ ಅವರು ಸಿದ್ಧಪಡಿಸಿದ “Ab ki baar, Modi sarkar” ಘೋಷವಾಕ್ಯ ದೇಶದಾದ್ಯಂತ ಜನಪ್ರಿಯವಾಯಿತು. ಇದಲ್ಲದೆ, ಅಮಿತಾಭ್ ಬಚ್ಚನ್ ಅವರನ್ನೊಳಗೊಂಡ ಪೋಲಿಯೊ ನಿರ್ಮೂಲನಾ ಜಾಗೃತಿ ಅಭಿಯಾನ, ಗುಜರಾತ್ ಪ್ರವಾಸೋದ್ಯಮ ಮತ್ತು ಕ್ಯಾನ್ಸರ್ ರೋಗಿಗಳ ಸಂಘದಂತಹ ಸಾರ್ವಜನಿಕ ಸೇವಾ ಜಾಹೀರಾತುಗಳೂ ಅವರ ಹೆಗ್ಗಳಿಕೆಗೆ ಸೇರಿವೆ.
ಬಹುಮುಖ ಪ್ರತಿಭೆ
ಪಿಯೂಷ್ ಪಾಂಡೆ ಅವರು ಕೇವಲ ಜಾಹೀರಾತು ಕ್ಷೇತ್ರಕ್ಕೆ ಸೀಮಿತವಾಗಿರಲಿಲ್ಲ. 2013ರಲ್ಲಿ ತೆರೆಕಂಡ ಜಾನ್ ಅಬ್ರಹಾಂ ನಟನೆಯ “ಮದ್ರಾಸ್ ಕೆಫೆ” ಚಿತ್ರದಲ್ಲಿ ಅವರೂ ನಟಿಸಿದ್ದರು. ದೇಶದ ರಾಷ್ಟ್ರೀಯ ಏಕತೆಯನ್ನು ಸಾರುವ “ಮಿಲೇ ಸುರ್ ಮೇರಾ ತುಮ್ಹಾರಾ” ಗೀತೆಯ ಸಾಹಿತ್ಯವನ್ನು ರಚಿಸಿದ್ದು ಅವರೇ. ಇದರೊಂದಿಗೆ “ಭೋಪಾಲ್ ಎಕ್ಸ್‌ಪ್ರೆಸ್” ಚಲನಚಿತ್ರಕ್ಕೆ ಸಹ-ಚಿತ್ರಕಥೆಗಾರರಾಗಿಯೂ ಕೆಲಸ ಮಾಡಿದ್ದರು. ಅವರ ಸೇವೆಗಾಗಿ 2016ರಲ್ಲಿ ಭಾರತ ಸರ್ಕಾರವು ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.
ಗಣ್ಯರ ಸಂತಾಪ
ಪಿಯೂಷ್ ಪಾಂಡೆ ಅವರ ನಿಧನಕ್ಕೆ ಉದ್ಯಮ, ರಾಜಕೀಯ ಮತ್ತು ಜಾಹೀರಾತು ಕ್ಷೇತ್ರದ ಗಣ್ಯರು ಕಂಬನಿ ಮಿಡಿದಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, “ಭಾರತೀಯ ಜಾಹೀರಾತು ಕ್ಷೇತ್ರದ ದಂತಕಥೆಯಾಗಿದ್ದ ಅವರು, ದೈನಂದಿನ ಭಾಷೆ, ಹಾಸ್ಯ ಮತ್ತು ಆತ್ಮೀಯತೆಯನ್ನು ಸಂವಹನದಲ್ಲಿ ತಂದರು,” ಎಂದು ಹೇಳಿದ್ದಾರೆ. ಕೋಟಕ್ ಮಹೀಂದ್ರಾ ಬ್ಯಾಂಕ್ ಸಂಸ್ಥಾಪಕ ಉದಯ್ ಕೋಟಕ್, “ಪಾಂಡೆ ಒಬ್ಬ ಅದ್ಭುತ ಚಿಂತಕ ಮತ್ತು ವಿನಮ್ರ ವ್ಯಕ್ತಿ. ಭಾರತೀಯತೆಗೆ ಸೃಜನಶೀಲತೆಯನ್ನು ಬೆಸೆದಿದ್ದರು,” ಎಂದು ಸ್ಮರಿಸಿದ್ದಾರೆ. ಲೇಖಕ ಸುಹೇಲ್ ಸೇಠ್, “ಭಾರತ ಕೇವಲ ಶ್ರೇಷ್ಠ ಜಾಹೀರಾತು ಮನಸ್ಸನ್ನು ಕಳೆದುಕೊಂಡಿಲ್ಲ, ಬದಲಿಗೆ ನಿಜವಾದ ದೇಶಭಕ್ತ ಮತ್ತು ಸಜ್ಜನರೊಬ್ಬರನ್ನು ಕಳೆದುಕೊಂಡಿದೆ,” ಎಂದು ಸಂತಾಪ ಸೂಚಿಸಿದ್ದಾರೆ.


















