ಬೇಲಿಯೇ ಎದ್ದು ಹೊಲ ಮೇಯ್ದಂತೆ ಎನ್ನುವ ಗಾದೆಯಂತೆ ನಗರಸಭೆ ಅಧ್ಯಕ್ಷ, ಮಾಜಿ ಅಧ್ಯಕ್ಷ ಮತ್ತು ಸದಸ್ಯರುಗಳು ಸೇರಿ ಲಕ್ಷಾಂತರ ರೂ. ಮೌಲ್ಯದ ಪೈಪ್ ಗಳನ್ನು ಕಳ್ಳತನ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನಲ್ಲಿ ನೆಡೆದಿದೆ.
ಫೆಬ್ರವರಿ 27ರಂದು ಶಿರಸಿ ನಗರಸಭೆ ವ್ಯಾಪ್ತಿಯ ಕೆಂಗ್ರೆ ನೀರು ಸರಭರಾಜು ಘಟಕದಲ್ಲಿ ಸುಮಾರು 21 ಲಕ್ಷ ರೂ. ಮೌಲ್ಯದ 116 ಪೈಪ್ ಕಳ್ಳತನವಾಗಿವೆ. ಈ ಕುರಿತು ಮಾರ್ಚ್ 4ರಂದು ಕಿರಿಯ ಅಭ್ಯಂತರ ಸೋಪಿಯನ್ ಬ್ಯಾರಿ ದೂರು ನೀಡಿದ್ದಾರೆ.
ಪ್ರಕರಣದ ತನಿಖೆ ಕೈಗೊಂಡಿದ್ದ ಪೊಲೀಸರು ಆರಂಭದಲ್ಲಿ ಝಕ್ರಿಯ ಸೈಯ್ಯದ್ ಎಂಬಾತನನ್ನು ಬಂಧಿಸಿದ್ದರು. ಆತ ಹಲವಾರು ಸ್ಫೋಟಕ ವಿಷಯಗಳನ್ನು ಬಾಯಿ ಬಿಟ್ಟಿದ್ದ. ಈ ಹಿಂದೆ ಹಳೆಯ ಪೈಪ್ ಗಳನ್ನು ತೆಗೆಯುವ ಟೆಂಡರ್ ಪಡೆದಾಗ ಅದು ನಷ್ಟವಾದ ಕಾರಣ ಪೈಪ್ ಗಳನ್ನು ಕಿತ್ತು ತೆಗೆದುಕೊಂಡು ಹೋಗಲಾಗಿದೆ ಎಂದು ತಿಳಿಸಿದ್ದಾನೆ. ಈ ವೇಳೆ ಪೈರ್ ಮಾರಾಟ ಮಾಡಿರುವ ಹಣ ಯಶವಂತ್ ಮರಾಟೆ ಎನ್ನುವವರ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗಿರುವ ವಿಷವನ್ನು ಬಾಯಿ ಬಿಟ್ಟಿದ್ದಾನೆ. ಅಲ್ಲದೇ, ನಗರಸಭೆ ಅಧ್ಯಕ್ಷ, ಮಾಜಿ ಅಧ್ಯಕ್ಷ ಹಾಗೂ ಸದಸ್ಯರ ಕೈವಾಡ ಇರುವುದು ಬೆಳಕಿಗೆ ಬಂದಿದೆ.
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿದ ವ್ಯಕ್ತಿ ಸೇರಿದಂತೆ ಒಟ್ಟು 6 ಜನರನ್ನು ಬಂಧಿಸಲಾಗಿದೆ. ನಗರಸಭೆ ಅಧ್ಯಕ್ಷ ಕಾಂತರಾಜು, ಜೂನಿಯರ್ ಇಂಜಿನಿಯರ್ ಸೋಫಿಯನ್, ಪ್ರಶಾಂತ್, ಮಾಜಿ ಅಧ್ಯಕ ಗಣಪತಿ ನಾಯಕ್, ನಗರಸಭೆ ಸದಸ್ಯ ಕುಮಾರ್, ಯಶವಂತ್ ಮರಾಟೆ ಬಂಧಿತ ಆರೋಪಿಗಳು ಎನ್ನಲಾಗಿದೆ.



















