ನವ ದೆಹಲಿ , ಜುಲೈ 19, 2025: ಏರ್ ಇಂಡಿಯಾ ವಿಮಾನ ಅಪಘಾತದ ಕುರಿತು ನೀಡಿದ ವರದಿಗಳು ವಾಸ್ತವಾಂಶಗಳ ಮೇಲೆ ಆಧಾರಿತವಾಗಿಲ್ಲ ಎಂದು ಆರೋಪಿಸಿ, ಫೆಡರೇಶನ್ ಆಫ್ ಇಂಡಿಯನ್ ಪೈಲಟ್ಸ್ (FIP) ಅಧ್ಯಕ್ಷ ಕ್ಯಾಪ್ಟನ್ ಸಿ.ಎಸ್. ರಂಧಾವಾ ಅವರು ವಾಲ್ ಸ್ಟ್ರೀಟ್ ಜರ್ನಲ್ (WSJ) ಮತ್ತು ರಾಯಿಟರ್ಸ್ ಸುದ್ದಿ ಸಂಸ್ಥೆಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
AI-171 ವಿಮಾನ ಅಪಘಾತದಲ್ಲಿ 250 ಕ್ಕೂ ಹೆಚ್ಚು ಜನರು ಮೃಪಪಟ್ಟ ಕುರಿತು ಏರ್‌ಕ್ರಾಫ್ಟ್ ಆಕ್ಸಿಡೆಂಟ್ ಇನ್ವೆಸ್ಟಿಗೇಶನ್ ಬ್ಯೂರೋ (AAIB) ಯ ಪ್ರಾಥಮಿಕ ವರದಿಯನ್ನು ಇಟ್ಟುಕೊಂಡು, ಈ ಸುದ್ದಿ ಸಂಸ್ಥೆಗಳು ಸತ್ಯಕ್ಕೆ ದೂರವಾದ ವರದಿಗಳನ್ನು ಪ್ರಕಟಿಸಿವೆ ಎಂದು ಅವರು ದೂರಿದ್ದಾರೆ.
ಕ್ಯಾಪ್ಟನ್ ಸಿ.ಎಸ್. ರಂಧಾವಾ ಅವರ ಈ ತೀಕ್ಷ್ಣ ಪ್ರತಿಕ್ರಿಯೆ ಕಾನೂನು ಕ್ರಮದ ಹಿನ್ನೆಲೆಯದ್ದಾಗಿದೆ. ವಾಲ್ ಸ್ಟ್ರೀಟ್ ಜರ್ನಲ್ ಮತ್ತು ರಾಯಿಟರ್ಸ್‌ಗೆ ಔಪಚಾರಿಕ ನೋಟಿಸ್ ಜಾರಿಗೊಳಿಸಿರುವ ಸಂಸ್ಥೆ ಅಧಿಕೃತ ಕ್ಷಮೆಯಾಚನೆಗೂ ಒತ್ತಾಯಿಸಿದೆ.
ಡಬ್ಲ್ಯುಎಸ್ಜೆ ಮತ್ತು ರಾಯಿಟರ್ಸ್‌ಗಳನ್ನು ತೀವ್ರವಾಗಿ ಟೀಕಿಸಿದ ರಂಧಾವಾ, ಅವುಗಳು “ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿವೆ” ಎಂದು ಆರೋಪಿಸಿದ್ದು, ಅವುಗಳ ವರದಿಗಳು “ವಾಸ್ತವಾಂಶಗಳ ಮೇಲೆ ಆಧಾರಿತವಾಗಿಲ್ಲ” ಎಂದು ಹೇಳಿದ್ದಾರೆ.
“ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿರುವ ವಾಲ್ ಸ್ಟ್ರೀಟ್ ಜರ್ನಲ್ ಅನ್ನು ನಾನು ಸಂಪೂರ್ಣವಾಗಿ ದೂಷಿಸುತ್ತೇನೆ. ಅವರು ತಮ್ಮದೇ ಆದ ತೀರ್ಮಾನಗಳೊಂದಿಗೆ ಬರುತ್ತಾರೆ. ಅವರೇನು ತನಿಖಾ ಸಂಸ್ಥೆಯೇ? ಅವರು ಜಗತ್ತಿನಾದ್ಯಂತ ಈ ಅಸಂಬದ್ಧ ಮಾತುಗಳನ್ನು ಆಡುತ್ತಿದ್ದಾರೆ. ಅವರು ತನಿಖಾ ಸಂಸ್ಥೆಯಲ್ಲ, ಮತ್ತು ವರದಿಗಳು ಪ್ರಾಥಮಿಕ ವರದಿಯಲ್ಲಿ ಉಲ್ಲೇಖಿಸಲಾದ ಯಾವುದೇ ವಾಸ್ತವಾಂಶಗಳ ಮೇಲೆ ಆಧಾರಿತವಾಗಿಲ್ಲ. ಹಾಗಾದರೆ, ಅವರು ಹೇಗೆ ತೀರ್ಮಾನಗಳಿಗೆ ಜಿಗಿದು ಪ್ರಪಂಚದಾದ್ಯಂತ ಪತ್ರಿಕಾ ಹೇಳಿಕೆಗಳನ್ನು ನೀಡಬಹುದು?” ಎಂದು ಅವರು ಎಎನ್‌ಐಗೆ ತಿಳಿಸಿದರು.
ಸಾರ್ವಜನಿಕ ಹೇಳಿಕೆಗೆ ಆಗ್ರಹ
ಎಎಐಬಿ ಪ್ರಾಥಮಿಕ ವರದಿಗಳ ಕುರಿತು ತಮ್ಮ ವರದಿಗಾರಿಕೆಯ ಬಗ್ಗೆ ಪತ್ರಿಕಾ ಹೇಳಿಕೆಯಲ್ಲಿ ವಿವರಣೆ ನೀಡುವಂತೆ ಎಫ್ಐಬಿ ಕಾನೂನು ನೋಟಿಸ್ ನೀಡಿದೆ ಎಂದು ಕ್ಯಾಪ್ಟನ್ ರಂಧಾವಾ ಹೇಳಿದ್ದಾರೆ.
“ನಾವು ಇದನ್ನು ಬಲವಾಗಿ ಖಂಡಿಸುತ್ತೇವೆ ಮತ್ತು ವಾಲ್ ಸ್ಟ್ರೀಟ್ ಜರ್ನಲ್ ಮತ್ತು ರಾಯಿಟರ್ಸ್‌ಗೆ ಕಾನೂನು ನೋಟಿಸ್‌ಗಳನ್ನು ಸಹ ನೀಡಿದ್ದೇವೆ. ಎಎಐಬಿಯ ಪ್ರಾಥಮಿಕ ವರದಿಯ ಭಾಗವಲ್ಲದ ಈ ತೀರ್ಮಾನಗಳಿಗೆ ನೀವು ಹೇಗೆ ಸಮರ್ಥಿಸಬಹುದು ಎಂದು ನಾವು ಸ್ಪಷ್ಟವಾಗಿ ಹೇಳಿದ್ದೇವೆ? ಪೈಲಟ್‌ಗಳನ್ನು ನೀವು ಹೇಗೆ ದೂಷಿಸಬಹುದು? ಆದ್ದರಿಂದ ನಾವು ವಿವರಣೆಯನ್ನು ಕೇಳಿದ್ದೇವೆ ಮತ್ತು ಪತ್ರಿಕಾ ಹೇಳಿಕೆ ನೀಡುವಂತೆ ಕೇಳಿದ್ದೇವೆ” ಎಂದು ಅವರು ತಿಳಿಸಿದರು.
ಎನ್ಟಿಎಸ್ಬಿ ಹೇಳಿಕೆಗೆ ಮೆಚ್ಚುಗೆ
ಪ್ರಾಥಮಿಕ ತನಿಖಾ ವರದಿಯ ಕುರಿತು ಇತ್ತೀಚಿನ ಮಾಧ್ಯಮ ವರದಿಗಳನ್ನು ತಳ್ಳಿಹಾಕಿದ ನ್ಯಾಷನಲ್ ಟ್ರಾನ್ಸ್‌ಪೋರ್ಟೇಶನ್ ಸೇಫ್ಟಿ ಬೋರ್ಡ್ (NTSB) ಹೇಳಿಕೆಯನ್ನು ಕ್ಯಾಪ್ಟನ್ ರಂಧಾವಾ ಶ್ಲಾಘಿಸಿದ್ದಾರೆ.
“ಎಎಐಬಿಯ ತನಿಖಾ ಸಮಿತಿಯ ಭಾಗವಾಗಿರುವ ಎನ್ಟಿಎಸ್ಬಿ ಅಧ್ಯಕ್ಷರಿಂದ ಈ ವರದಿ ಬಂದಿರುವುದು ನಮಗೆ ಸಂತೋಷ ತಂದಿದೆ. ಅವರು ಈ ಹೇಳಿಕೆಯನ್ನು ನೀಡಿದ್ದು, ಇದು ಪಾಶ್ಚಿಮಾತ್ಯ ಮಾಧ್ಯಮಗಳು ಊಹಾಪೋಹಗಳನ್ನು ಮತ್ತು ಭಾರತೀಯ ಪೈಲಟ್‌ಗಳನ್ನು ದೂಷಿಸುವುದನ್ನು ನಿಲ್ಲಿಸಲಿದೆ ” ಎಂದು ಅವರು ಹೇಳಿದ್ದಾರೆ.